ಸಿನಿವಾಣಿ

ಮಾಫಿಯಾ ರಾಣಿ ಆಲಿಯಾ

vijayavani

ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ಎರಡು ಪೋಸ್ಟರ್​ಗಳು ಬಿಡುಗಡೆ ಆಗಿದ್ದು, ಭಾರಿ ಸದ್ದು ಮಾಡುತ್ತಿವೆ.

ನೈಜಕಥೆ ಆಧಾರಿತ ಈ ಚಿತ್ರದಲ್ಲಿ ಪ್ರಯೋಗಾತ್ಮಕ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದು, ಪೋಸ್ಟರ್ ಮೂಲಕ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಒಂದು ಪೋಸ್ಟರ್​ನಲ್ಲಿ ಆಲಿಯಾ ಭಟ್ ನೀಲಿ ಕುಪ್ಪಸ, ಹಸಿರು ಸ್ಕರ್ಟ್ ಧರಿಸಿ, ಹಣೆಗೆ ಕೆಂಪು ಬಿಂದಿ ಇಟ್ಟುಕೊಂಡು ಗೋಡೆಗೆ ಒರಗಿ ಕುಳಿತ ಮುಗ್ಧ ಹುಡುಗಿಯಂತೆ ಕಂಡರೆ, ಮತ್ತೊಂದು ಪೋಸ್ಟರ್​ನಲ್ಲಿ ಮಾಫಿಯಾ ರಾಣಿಯಂತೆ ಕಂಗೊಳಿಸುತ್ತಾರೆ. ಆಲಿಯಾ ದೊಡ್ಡದಾದ ಬಿಂದಿ, ನತ್ತು, ಕುತ್ತಿಗೆಗೆ ಮುತ್ತಿನ ಹಾರ ಧರಿಸಿ ಗಂಭೀರ ನೋಟ ಬೀರುತ್ತಿರುವ ಪೋಸ್ಟರ್ ಇದಾಗಿದೆ.

ಹುಸೇನ್ ಝೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. 1960ರ ದಶಕದಲ್ಲಿ ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟ ಗಂಗೂಬಾಯಿ, ಮುಂದೆ ‘ಕಾಮಾಟಿಪುರದ ಮೇಡಂ’ ಅಂತಲೇ ಕುಪ್ರಸಿದ್ಧಿ ಪಡೆಯುತ್ತಾಳೆ. ವೇಶ್ಯಾವಾಟಿಕೆ ಮೂಲಕ ಆಕೆ ಹೇಗೆ ಪ್ರಭಾವಶಾಲಿ ಆಗುತ್ತಾಳೆ ಎಂಬುವುದೇ ಚಿತ್ರದ ಕಥಾಹಂದರ.

ರಣಬೀರ್ ಸಿಂಗ್, ಶಾಹೀದ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪದ್ಮಾವತ್’ ಚಿತ್ರದ ಬಳಿಕ ಬಹುದಿನಗಳ ನಂತರ ಸಂಜಯ್ಲೀಲಾ ಬನ್ಸಾಲಿ ಅವರು ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ, ಅಲಿಯಾ ಭಟ್ ಕೂಡ ಸಂಜಯ್ ನಿರ್ದೇಶನದ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಹೀಗಾಗಿ ಸದ್ಯ ಬಿಡುಗಡೆ ಆಗಿರುವ ಈ ಎರಡು ಪೋಸ್ಟರ್​ಗಳಿಂದ ಈ ಜೋಡಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಅಂದಹಾಗೆ ಈ ಚಿತ್ರವನ್ನು ಇದೇ ವರ್ಷ ಸೆ.11ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಪೋಸ್ಟರ್​ಗಳ ಮುಖಾಂತರ ಘೋಷಿಸಿಕೊಂಡಿದೆ. -ಏಜೆನ್ಸೀಸ್