ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ದಂಗಲ್' ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್&ಕಟ್ ಹೇಳುತ್ತಿರುವ, ರಣಬೀರ್ ಕಪೂರ್, ಸಾಯಿಪಲ್ಲವಿ ಮತ್ತು ಯಶ್ ರಾಮ, ಸೀತೆ ಮತ್ತು ರಾವಣನ ಪಾತ್ರಗಳಲ್ಲಿ ನಟಿಸುತ್ತಿರುವ ಬಹುನಿರೀತ ಸಿನಿಮಾ "ರಾಮಾಯಣ'. ಈ ಚಿತ್ರದಲ್ಲಿ ನಟನೆಯ ಜತೆಗೆ ಯಶ್ ತಮ್ಮ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ನಿರ್ಮಾಪಕನಾಗಿಯೂ ತಂಡಕ್ಕೆ ಸಾಥ್ ನೀಡಿದ್ದಾರೆ. ಹೀಗಾಗಿಯೇ ಚಿತ್ರದ ಪ್ರತಿಯೊಂದು ಹಂತದಲ್ಲೂ ಗಮನಹರಿಸುತ್ತಿರುವ ಅವರು, ಇದೀಗ ಸಾಹಸ ಸನ್ನಿವೇಶಗಳನ್ನು ಸಂಯೋಜಿಸಲು ಹಾಲಿವುಡ್ನ "ಮ್ಯಾಡ್ ಮ್ಯಾಕ್ಸ್' ಸರಣಿ, "ದ ಸೂಸೈಡ್ ಸ್ಕ್ವಾಡ್' ಸೇರಿ ಹಲವು ಸಿನಿಮಾ, ಸರಣಿಗಳಿಗೆ ಸಾಹಸ ನಿರ್ದೇಶಿಸಿರುವ ಗಯ ನೋರಿಸ್ರನ್ನು ಕರೆತಂದಿದ್ದಾರೆ.
ಪೌರಾಣಿಕ ಚಿತ್ರವಾದ ಕಾರಣ ಹೇರಳವಾಗಿ ವಿಎಫ್ಎಕ್ಸ್, ಸಿಜಿ ಇರಲಿದ್ದು, ಎಐ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಗಯ್ ನೋರಿಸ್ "ರಾಮಾಯಣ' ಚಿತ್ರತಂಡ ಸೇರಿಕೊಂಡಿದ್ದು, ಮುಂಬೈನ ಸೆಟ್ನಲ್ಲಿ ಯಶ್ ಜತೆ ನಿಂತು ಸನ್ನಿವೇಶಗಳನ್ನು ಪ್ಲಾ$್ಯನ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.
ನಿತೇಶ್ ತಿವಾರಿ "ರಾಮಾಯಣ' ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗದ ಚಿತ್ರೀಕರಣಕ್ಕಾಗಿಯೇ ನಟ ಯಶ್ 60ರಿಂದ 70 ದಿನಗಳಷ್ಟು ಡೇಟ್ಸ್ ನೀಡಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತಾದರೆ "ರಾಮಾಯಣ ಭಾಗ 1' 2026ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬಂದರೆ, "ರಾಮಾಯಣ ಭಾಗ 2' 2027ರಲ್ಲಿ ರಿಲೀಸ್ ಆಗಲಿದೆ. ಆ ಮೂಲಕ ಮುಂದಿನ ವರ್ಷವೇ ಯಶ್ ಅಭಿನಯದ "ಟಾಕ್ಸಿಕ್' ಮತ್ತು "ರಾಮಾಯಣ' ಎರಡೂ ಚಿತ್ರಗಳು ಬಿಡುಗಡೆಯಾಗಲಿವೆ.