ಸಿನಿವಾಣಿ

16 ದಿನಕ್ಕೆ 1.72 ಕೋಟಿ ರೂ.! ಇದು ಮದಗಜ ವಿಲನ್​ನ ಸಂಭಾವನೆ

ಬೆಂಗಳೂರು: ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಲಾಕ್​ಡೌನ್ ಶುರುವಾಗುವುದಕ್ಕಿಂತ ಮುಂಚೆಯೇ ಮುಗಿದಿದೆ. ಈಗ ಎರಡನೆಯ ಹಂತದ ಚಿತ್ರೀಕರಣ ಜುಲೈ 13ರಂದು ಪ್ರಾರಂಭವಾಗಲಿದ್ದು, ಈ ಹಂತದಲ್ಲಿ ಚಿತ್ರದ ವಿಲನ್​ನ ಎಂಟ್ರಿಯಾಗಲಿದೆ.

ಚಿತ್ರದಲ್ಲಿ ಶ್ರೀಮುರಳಿ ಎದುರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವವರು ಯಾರು? ಈ ಬಗ್ಗೆ ಚಿತ್ರತಂಡದಿಂದ ನಿಖರವಾದ ಉತ್ತರ ಬರದಿದ್ದರೂ, ತೆಲುಗು ನಟ ಜಗಪತಿ ಬಾಬು ಮತ್ತು ತಮಿಳು ನಟ ವಿಜಯ್ ಸೇತುಪತಿ ಅವರ ಹೆಸರು ವಿಪರೀತವಾಗಿ ಕೇಳಿ ಬರುತ್ತಿದೆ.

ಇಬ್ಬರಲ್ಲಿ ಯಾರೇ ಬರಲಿ, ಅವರು ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಖಳನಟನಾಗುತ್ತಾರೆ ಎಂದು ಹೇಳುತ್ತಾರೆ ನಿರ್ದೇಶಕ ಮಹೇಶ್. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿತ್ರ ಏಕಕಾಲಕ್ಕೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಹಾಗಾಗಿ ಮೂರೂ ಭಾಷೆಗಳಲ್ಲಿ ಪರಿಚಯವಿರುವ ಒಬ್ಬ ನಟ ಬೇಕಾಗಿತ್ತು. ನಾವು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿರುವವರಿಗೆ ಕೊಡುತ್ತಿರುವ ಸಂಭಾವನೆ ಒಂದು ಕೋಟಿ 72 ಲಕ್ಷ. ಕನ್ನಡದಲ್ಲಿ ಇದುವರೆಗೂ ನೆಗೆಟಿವ್ ಪಾತ್ರಕ್ಕೆ ಇಷ್ಟೊಂದು ಹಣ ಯಾರೂ ಕೊಟ್ಟ ಉದಾಹರಣೆ ಇಲ್ಲ. ಈಗಾಗಲೇ 16 ದಿನಗಳ ಕಾಲ್​ಶೀಟ್ ಸಿಕ್ಕಿದೆ. ಜುಲೈ 13ರಿಂದ ಒಂಬತ್ತು ದಿನಗಳ ಮೊದಲು ಚಿತ್ರೀಕರಣ ಮಾಡಿ, ಬಾಕಿ ಇರುವ ಅವರ ಭಾಗದ ಚಿತ್ರೀಕರಣವನ್ನು ಆಗಸ್ಟ್​ನಲ್ಲಿ ಮಾಡುವುದಕ್ಕೆ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಮಹೇಶ್.

ಅದಕ್ಕೂ ಮುನ್ನ ಜುಲೈ ಒಂದರಂದು, ಅವರ ಟೀಸರ್ ಚಿತ್ರೀಕರಣ ಮಾಡಲಾಗುತ್ತದಂತೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಅವರನ್ನು ಪರಿಚಯಿಸುವ ಯೋಚನೆ ಇದೆ ಎನ್ನುತ್ತಾರೆ ಮಹೇಶ್.