ಸಿನಿವಾಣಿ

ಮೈಸೂರಲ್ಲಿ ಮದಗಜ ಕಾಳಗ; ದುಬಾರಿ ವೆಚ್ಚದ ಸೆಟ್‌ನಲ್ಲಿ ಮಾಸ್ ಫೈಟ್

ಬೆಂಗಳೂರು: ಕರೊನಾ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ಸಿನಿಮಾ ತಂಡಗಳು ಯಥಾಸ್ಥಿತಿಗೆ ಮರಳುತ್ತಿವೆ. ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣವನ್ನು ಮತ್ತೆ ಶುರು ಮಾಡಿಕೊಳ್ಳಲು ತಯಾರಿ ನಡೆಸಿವೆ. ಇದೀಗ ಶ್ರೀಮುರಳಿ ನಾಯಕತ್ವದ ‘ಮದಗಜ’ ಚಿತ್ರತಂಡ ಸಹ ಶೂಟಿಂಗ್‌ಗೆ ಪ್ಲಾನ್ ಮಾಡಿದೆ. ಅರಮನೆ ನಗರಿ ಮೈಸೂರಿನಲ್ಲಿ ಇಡೀ ತಂಡ ಬಿಡಾರ ಹೂಡಲಿದ್ದು, ಸೆ. 19ರಿಂದ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳ ಜತೆ ಒಂದಷ್ಟು ಮಾತಿನ ಭಾಗದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಿದೆ.

‘ಶೀರ್ಷಿಕೆಗೆ ತಕ್ಕಂತೆ ಇದೊಂದು ಮಾಸ್ ಸಿನಿಮಾ ಆಗಿರುವುದರಿಂದ ಆ್ಯಕ್ಷನ್ ದೃಶ್ಯಗಳು ಅಷ್ಟೇ ರೋಚಕವಾಗಿರಬೇಕು. ಆ ನಿಟ್ಟಿನಲ್ಲಿ ಮೈಸೂರಿನಲ್ಲಿ ಸೆಟ್ ಹಾಕಿ ಧೂಳಿನಲ್ಲಿ ಫೈಟ್ ಸನ್ನಿವೇಶವನ್ನು ಒಟ್ಟು ಏಳು ದಿನ ಶೂಟ್ ಮಾಡಲಿದ್ದೇವೆ. ದುಬಾರಿ ವೆಚ್ಚದಲ್ಲಿ ಸೆಟ್ ನಿರ್ಮಾಣ ಕಾರ್ಯವೂ ಈಗಾಗಲೇ ನಡೆಯುತ್ತಿದೆ. ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್‌ಗಳಾದ ರಾಮ್- ಲಕ್ಷ್ಮಣ ಕೈ ಜೋಡಿಸಿದ್ದಾರೆ’ ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಮಹೇಶ್.

ಒಟ್ಟು 19 ದಿನಗಳ ಚಿತ್ರೀಕರಣ ಮಾಡಿಕೊಳ್ಳಲಿರುವ ‘ಮದಗಜ’ ತಂಡ, ಆ ಅವಧಿಯಲ್ಲಿ ಮಾತಿನ ಭಾಗದ ಚಿತ್ರೀಕರಣ ಮತ್ತು ಫೈಟ್ಸ್ ಮುಗಿಸಿಕೊಳ್ಳಲಿದೆ. ಈಗಾಗಲೇ ವಾರಾಣಸಿಯಲ್ಲಿ ಚಿತ್ರೀಕರಣ ಮುಗಿದಿದ್ದು, ಮೈಸೂರಿನ ಶೂಟಿಂಗ್ ಮುಗಿದರೆ ಅಲ್ಲಿಗೆ ಚಿತ್ರದ ಶೇ. 70 ಭಾಗ ಮುಕ್ತಾಯವಾದಂತೆ. ನಾಲ್ಕು ಹಾಡುಗಳ ಪೈಕಿ ಒಂದು ಹಾಡಿನ ಕೆಲಸ ಈಗಾಗಲೇ ಮುಗಿದಿದೆ.

ಮೈಸೂರಿನಲ್ಲಿ ದುಬಾರಿ ವೆಚ್ಚದ ಟ್ ನಿರ್ಮಾಣ ಕಾರ್ಯ ಶುರುವಾಗಿದೆ. ದಕ್ಷಿಣ ಭಾರತದ ಇಬ್ಬರು ಘಟಾನುಘಟಿ ವಿಲನ್‌ಗಳು ಈ ಫೈಟ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ. ಅವರ ಝಲಕ್ ಹೇಗಿರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಪರಿಚಯ ಮಾಡಿಕೊಡಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮಹೇಶ್.