ಸಿನಿವಾಣಿ

ಕಾಲಿವುಡ್‌ ನಿರ್ದೇಶಕ ಸೂರ್ಯ ಪ್ರಕಾಶ್​ ಹೃದಯಾಘಾತದಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ

ಚೆನ್ನೈ: ಇತ್ತೀಚಿಗೆ ಹೃದಯಾಘಾತದ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಕಾಲಿವುಡ್‌ನಲ್ಲಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಸೂರ್ಯ ಪ್ರಕಾಶ್​ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ತಮಿಳು ನಟ ಶರತ್ ಕುಮಾರ್ ದಂಪತಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಅವರು ತಮ್ಮ 'ಮಾಯಿ', 'ಮಾಣಿಕ್ಕಂ' ಮತ್ತು 'ದಿವಾನ್' ಚಿತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸೂರ್ಯ ಪ್ರಕಾಶ್ ಅವರ ಅಂತಿಮ ವಿಧಿವಿಧಾನಗಳ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.

ನಾನು ನಟಿಸಿದ ‘ಮಾಯಿ’ ಮತ್ತು ‘ದಿವಾನ್’ ಚಿತ್ರಗಳನ್ನು ನಿರ್ದೇಶಿಸಿದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನಿನ್ನೆಯಷ್ಟೇ ಅವರೊಂದಿಗೆ ಮಾತನಾಡಿದ್ದೆ. ಅವರ ಹಠಾತ್ ನಿಧನ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನಟ ಶರತ್‌ಕುಮಾರ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

56ನೇ ವಯಸ್ಸಿಗೆ ಸೂರ್ಯ ಪ್ರಕಾಶ್ ಸಾವಿನ ಸುದ್ದಿ ಕೇಳಿ ಸುದ್ದಿ ಕೇಳಿ ಕುಟುಂಬಸ್ಥರು, ಅಭಿಮಾನಿಗಳಿಗೆ ಆಘಾತವಾಗಿದೆ. ಅಂತಿಮ ವಿಧಿವಿದಾನಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ವಿವರ ಸಿಗಬೇಕಿದೆ. ಅಂದಹಾಗೆ, ಮಾಯಿ, ಮಣಿಕ್ಕಂ, ದಿವಾನ್, ಭರತಸಿಂಹ ರೆಡ್ಡಿ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸೂರ್ಯ ಪ್ರಕಾಶ್ ಹಿಟ್ ಚಿತ್ರಗಳನ್ನು ನೀಡಿದ್ದರು.

ರಾಧಿಕಾ ಶರತ್‌ಕುಮಾರ್ ತಮ್ಮ ಸಂತಾಪ ವ್ಯಕ್ತಪಡಿಸಿದ್ದು, “ಅದ್ಭುತ ಮತ್ತು ಪ್ರತಿಭಾವಂತ ವ್ಯಕ್ತಿ, ಉತ್ತಮ ಬರಹಗಾರ, ಹಾಸ್ಯದ ಅಭಿರುಚಿಯ ನಿರ್ದೇಶಕ, ಪದಗಳಿಗೆ ಮೀರಿ ಆಘಾತವಾಗಿದೆ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿರ್ದೇಶಕ ಸೂರ್ಯಪ್ರಕಾಶ್ 1999 ರಲ್ಲಿ ನಟ ರಾಜ್ಕಿರಣ್ ಮತ್ತು ನಟಿ ವನಿತಾ ವಿಜಯಕುಮಾರ್ ಅಭಿನಯದ ಮಾಣಿಕಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ಶರತ್ ಕುಮಾರ್ ಅವರ ‘ಮಾಯಿ’ ಮತ್ತು ‘ದಿವಾನ್’ ಅನ್ನು ನಿರ್ದೇಶಿಸಿದ್ದರು.