ಸಿನಿವಾಣಿ

ಮಾರ್ ಟೈಟಲ್ ಟ್ರ್ಯಾಕ್; ಹೊಸಬರ ಚಿತ್ರಕ್ಕೆ ಸಾಥ್ ನೀಡಿದ ಶ್ರೇಯಸ್ ಮಂಜು

ಬೆಂಗಳೂರು: ಅನಿಲ್ ವೆಂಕಟರಾಜು ಆ್ಯಕ್ಷನ್-ಕಟ್ ಹೇಳುತ್ತಿರುವ ಹೀರೋ ಪ್ರಧಾನ ಮಾಸ್ ಆ್ಯಕ್ಷನ್ ಸಿನಿಮಾ ‘ಮಾರ್’. ಈ ಚಿತ್ರದ ಮೂಲಕ ವಿಜಯ್ ವೆಂಕಟೇಶ್ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ವಿಜಯ್ ಹೊತ್ತಿದ್ದಾರೆ.

ಇತ್ತೀಚೆಗಷ್ಟೆ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಲಾಯಿತು. ನಟ ಶ್ರೇಯಸ್ ಮಂಜು ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಗೀತೆಗೆ ನಿರ್ದೇಶಕ ಅನಿಲ್ ಸಾಹಿತ್ಯ ಬರೆದಿದ್ದು, ಕೃಷ್ಣ ಸುಮೈರಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಬಗ್ಗೆ ಅನಿಲ್, ‘ಮಾಸ್ ಜತೆಗೆ ಕುಟುಂಬದ ಬಾಂಧವ್ಯ ಹಾಗೂ ಭಾವನೆಗಳ ಬಗ್ಗೆ ಬೆಳಕು ಚೆಲ್ಲುವ ್ಯಾಮಿಲಿ ಎಂಟರ್‌ಟೇನ್ಮೆಂಟ್ ಸಿನಿಮಾ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳು ಕಾಲ ಶೂಟಿಂಗ್ ನಡೆಯಲಿದೆ’ ಎಂದು ಮಾಹಿತಿ ನೀಡಿದರು. ಈ ಚಿತ್ರಕ್ಕೆ ನಾಯಕಿ ಇಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ನಾಯಕ ವಿಜಯ್, ‘ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕ ಯಾಕೆ ಹೀಗಿದ್ದಾನೆ ಎನ್ನುವುದು ಗೊತ್ತಾಗುತ್ತದೆ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.

ಇನ್ನು ಚಿತ್ರಕ್ಕೆ ಸುಹಾಸ್ ಛಾಯಾಗ್ರಹಣ, ಧೀರಜ್ ಸಂಕಲನ, ಪ್ರವೀಣ್ ನೃತ್ಯ ನಿರ್ದೇಶನವಿರಲಿದೆ. ‘ಮಾರ್’ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ.