ನವದೆಹಲಿ: ದೇಶದ ಸಿನಿಮಾ ರಂಗದ ಪ್ರಖ್ಯಾತ ನಟಿಯರಲ್ಲಿ ತಮನ್ನಾ ಭಾಟಿಯಾ ಕೂಡ ಒಬ್ಬರು. ಸರಿ ಸುಮಾರು ಎರಡು ದಶಕಗಳ ವೃತ್ತಿ ಜೀವನದಲ್ಲಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ತಮ್ಮ ಅಭಿನಯ, ಡಾನ್ಸ್ ಮತ್ತು ಸೌಂದರ್ಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ. ಇದೀಗ ಮುಂಬರುವ "ಲಸ್ಟ್ ಸ್ಟೋರಿಸ್ 2" ವೆಬ್ ಸರಣಿಯಲ್ಲಿ ಮಡಿವಂತಿಕೆಯ ಚೌಕಟ್ಟಿನಿಂದ ಹೊರಬಂದು ಇದೇ ಮೊದಲ ಬಾರಿಗೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಫಿಲ್ಮ್ ಕಂಪ್ಯಾನಿಯನ್ ಸಂದರ್ಶನದಲ್ಲಿ ಮಾತನಾಡಿರುವ ತಮನ್ನಾ, 18 ವರ್ಷಗಳ ನೋ ಕಿಸ್ಸಿಂಗ್ ನೀತಿಗೆ ಇದೀಗ ತೆರೆ ಎಳೆದಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ಲಸ್ಟ್ ಸ್ಟೋರೀಸ್ ಸರಣಿಗಾಗಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದರ ಹಿಂದಿನ ಕಾರಣವನ್ನು ಮಿಲ್ಕಿ ಬ್ಯೂಟಿ ವಿವರಿಸಿದ್ದಾರೆ. ಅಂದಹಾಗೆ ಈ ವೆಬ್ಸರಣಿಯ ಭಾಗವನ್ನು ಸುಜೋಯ್ ಘೋಷ್ ಎಂಬುವರು ನಿರ್ದೇಶಿಸಿದ್ದಾರೆ. ಬಾಯ್ಫ್ರೆಂಡ್ ವಿಜಯ್ ವರ್ಮ ಸಹ ಈ ಸರಣಿಯಲ್ಲಿ ನಟಿಸಿದ್ದಾರೆ.
ನಾನು ಸುಜೋಯ್ ನಿರ್ದೇಶನದಲ್ಲಿ ನಟಿಸಬೇಕೆಂದು ನಿಜಕ್ಕೂ ಬಯಸಿದ್ದೆ ಮತ್ತು ಈ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ನಿಜಕ್ಕೂ ಖುಷಿಯಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಎಂದೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿಲ್ಲ. ಮೃಧುವಾದ ಇಂಟಿಮಸಿ ದೃಶ್ಯಗಳಲ್ಲಿ ಮಾತ್ರ ನಟಿಸಿದ್ದೆ. ಇಂತಹ ದೃಶ್ಯಗಳಲ್ಲಿ ನಟಿಸಲು ಮುಜುಗರ ಅನುಭವಿಸುತ್ತಿದ್ದೆ ಎಂದು ಸಂದರ್ಶನದಲ್ಲಿ ತಮನ್ನಾ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ತಮನ್ನಾ, ನೋ ಕಿಸ್ಸಿಂಗ್ ನೀತಿಯನ್ನು ಮುರಿದು ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ ಎಂದು ವಿವರಿಸಿದರು. ನಾನು ಇದುವರೆಗೂ ನಿರ್ದಿಷ್ಟ ಪ್ರೇಕ್ಷಕರಿಗೆ ಮಾತ್ರ ಮನರಂಜನೆ ನೀಡುತ್ತಿದ್ದ ಒಂದೇ ಚೌಕಟ್ಟಿನಲ್ಲಿ ಸಿಲುಕಿದ್ದಂತಹ ವ್ಯಕ್ತಿಯಾಗಿದ್ದೆ, ಆ ಚೌಕಟ್ಟಿನಿಂದ ವಿಕಸನದೆಡೆಗೆ ಬದಲಾಗುವ ಅವಶ್ಯಕತೆ ಇತ್ತು. ಭಾರತವು ದೊಡ್ಡದಾಗಿದೆ ಮತ್ತು ಭಾರತದ ಹಲವು ಭಾಗಗಳು ಇನ್ನೂ ವಿಕಸನಗೊಳ್ಳಬೇಕಾಗಿದೆ. ಈಗಾಗಲೇ ಸಾಕಷ್ಟು ವಿಕಸನ ಆಗಿದೆ. ಅದಕ್ಕೆ ಕಾರಣವಾದ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಗೆ ಧನ್ಯವಾದಗಳು. ಇಂದು ಬೆರಳ ತುದಿಯಲ್ಲೇ ಪ್ರತಿಯೊಂದು ಮಾಹಿತಿಯು ಲಭ್ಯವಾಗುತ್ತದೆ. ಪ್ರತಿಯೊಬ್ಬರಿಗೆ ಸಾಕಷ್ಟು ವಿಷಯಗಳು ಸಿಗುತ್ತಿವೆ. ನಾನೊಬ್ಬ ಕಲಾವಿದೆಯಾಗಿ ಯಾವುದನ್ನು ಹಿಡಿದಿಟ್ಟುಕೊಳ್ಳುವುದನ್ನು ಬಯಸುವುದಿಲ್ಲ. ಇದು ಸಂಪೂರ್ಣ ಸೃಜನಾತ್ಮಕ ಪ್ರಯತ್ನವಾಗಿದೆ. ಹೀಗಾಗಿ ನಾನು ಎಲ್ಲ ನೀತಿಗಳಿಗೆ ಬ್ರೇಕ್ ಹಾಕಿದ್ದೇನೆ. 18 ವರ್ಷಗಳ ವೃತ್ತಿ ಜೀವನದ ಬಳಿಕ ನಾನು ಖ್ಯಾತಿ ಪಡೆಯಲು ಯತ್ನಿಸುತ್ತಿಲ್ಲ. ಅದು ನನ್ನ ಆದ್ಯತೆಯು ಅಲ್ಲ ಎಂದು ತಮನ್ನಾ ಹೇಳಿದರು.
ಇದೇ ಸಂದರ್ಶನದಲ್ಲಿ ವಿಜಯ್ ವರ್ಮ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದ ತಮನ್ನಾ, ಅವರು ತುಂಬಾ ನೈಜವಾಗಿ ಬಾಂಧವ್ಯ ಹೊಂದಿರುವ ವ್ಯಕ್ತಿ. ನನ್ನ ಬಗ್ಗೆ ಆಳವಾಗಿ ಕಾಳಜಿ ವಹಿಸುವ ವ್ಯಕ್ತಿ ಮತ್ತು ಅವನು ನನ್ನ ಸಂತೋಷದ ಸ್ಥಳ ಎಂದು ತಮನ್ನಾ ಹೇಳಿದರು. (ಏಜೆನ್ಸೀಸ್)