ಸಿನಿವಾಣಿ

ಪ್ರೇಮಕಥೆ: ಪ್ರೀತಿಯ ಜತೆಯಲಿ ತಾಳ್ಮೆ ಇರಲಿ

 ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ... ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

ಒಂಬತ್ತು ವರ್ಷಗಳ ಹಿಂದೆ ಒಮ್ಮೆ ಚೈತ್ರಾ ಬಂದು ನನ್ನ ಎದುರು ಪ್ರೇಮ ನಿವೇದನೆ ಮಾಡಿದಾಗ ನಾನು ಇನ್ನೂ ಮೊದಲ ವರ್ಷದ ಬಿಎಎಂಎಸ್ ಓದುತ್ತಿದ್ದೆ. ಜೀವನದ ನೂರೆಂಟು ಗೊಂದಲಗಳಲ್ಲಿ ಸಿಲುಕಿಕೊಂಡಿದ್ದೆ. ಅವಳೇ ನನಗೆ ಪ್ರೀತಿಯ ಹಾದಿ ತೋರಿಸಿ, ಒಪ್ಪುವಂತೆ ಮಾಡಿದಳು. ಮನದಲ್ಲಿ ಅವಳ ಪ್ರೀತಿ ಪಡೆಯಬೇಕೆಂಬ ಆಸೆ ಇದ್ದರೂ ತಿರಸ್ಕರಿಸಿದವನಂತೆ ತೋರ್ಪಡಿಸಿಕೊಂಡೆ. ಅವಳು ಛಲ ಬಿಡಲಿಲ್ಲ. ಮತ್ತೆ ಮತ್ತೆ ಪ್ರೀತಿ ಅರಸಿ ಬರುತ್ತಲೇ ಇದ್ದಳು. ಕೊನೆಗೂ ಹೃದಯಗಳು ಒಂದಾದವು. ಮನೆಯಲ್ಲಿ ನಮ್ಮ ಪ್ರೇಮಕ್ಕೆ ಮೊದಲು ವಿರೋಧ ವ್ಯಕ್ತವಾದರೂ ನಾವು ಮಾತ್ರ ಸ್ಥಿರವಾಗಿಯೇ ಇದ್ದೆವು. ಇಂದು ನಾನು ಡಾಕ್ಟರ್. ನನ್ನವಳು ಲ್ಯಾಬ್ ಟೆಕ್ನಿಷಿಯನ್. ಕೊನೆಗೂ ಎರಡೂ ಮನೆಯವರ ಮನಗಳನ್ನು ಜಯಿಸಿದೆವು; ಪ್ರೀತಿಯ ಪತಾಕೆ ಹಾರಿಸಿದೆವು. 2019ರ ಏಪ್ರಿಲ್ 22 ರಂದು ಗುರು ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಮದುವೆ ಆದೆವು. 9 ವರ್ಷಗಳ ನಮ್ಮತಾಳ್ಮೆಯೇ ನಮ್ಮ ಪ್ರೀತಿಯನ್ನು ಗೆಲ್ಲಿಸಿತು.

| ಡಾ. ಮಂಜುನಾಥ ಎಸ್. ಪೊಲೀಸ್​ಪಾಟೀಲ್ ಕೊಪ್ಪಳ