ಸಿನಿವಾಣಿ

ಅನೀಶ್​ಗೆ ಜಾನ್ವಿಕಾ ಒಟಿಪಿ! ಲವ್​ ಅಂದರೆ "ಓವರ್​ ಟಾರ್ಚರ್​ ಪ್ರೆಷರ್​' ಎಂದ ಚಿತ್ರತಂಡ...

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಅನೀಶ್​ ತೇಜೇಶ್ವರ್​ ನಟಿಸಿ, ನಿರ್ದೇಶಿಸಿರುವ ಜಾನ್ವಿಕಾ ಕಲಕೇರಿ ಮತ್ತು ಸ್ವರೂಪಿಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ "ಲವ್​ ಓಟಿಪಿ'. ವಿಶೇಷ ಅಂದರೆ ಇಲ್ಲಿ "ಓಟಿಪಿ' ಎಂದರೆ "ಒನ್​ ಟೈಮ್​ ಪಾಸ್​ವರ್ಡ್​' ಅಂತಲ್ಲ ಬದಲಾಗಿ, "ಓವರ್​ ಟಾರ್ಚರ್​ ಪ್ರೆಷರ್​' ಎಂದು ಚಿತ್ರತಂಡ ಹೊಸ ವ್ಯಾಖ್ಯಾನ ನೀಡಿದೆ. ಇದೇ ನ. 21ರಂದು ಈ ರೊಮ್ಯಾಂಟಿಕ್​ ಕಾಮಿಡಿ ರಿಲೀಸ್​ ಆಗಲಿದೆ.

ಚಿತ್ರದ ಬಗ್ಗೆ ನಾಯಕಿ ಜಾನ್ವಿಕಾ ಕಲಕೇರಿ, ""ಲವ್​ ಒಟಿಪಿ'ಗೆ ಎಲ್ಲರಿಗಿಂತ ಕೊನೆಯಲ್ಲಿ ಸೇರಿದವಳು ನಾನು. ಅನೀಶ್​ ಸರ್​ ಕರೆ ಮಾಡಿ ಕಥೆ, ಪಾತ್ರ ಹಾಗೂ ಎರಡು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ಬಗ್ಗೆ ತಿಳಿಸಿದರು. ಕಥೆ ತುಂಬ ಚೆನ್ನಾಗಿದೆ. ಫಿಸಿಯೋಥೆರಪಿಸ್ಟ್​ ಆಗಿರುವ ನಕ್ಷತ್ರಾ ಎಂಬ ಗರ್ಲ್​ ನೆಕ್ಸ್ಟ್​ ಡೋರ್​, ಬಬ್ಲಿ, ಕ್ಯೂಟ್​ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಪಾತ್ರಕ್ಕೆ ತುಂಬ ಸಿದ್ಧತೆ ಬೇಕಿತ್ತು. ಮಾತುಕತೆ ಆದ 10 ದಿನಗಳಲ್ಲೇ ಶೂಟಿಂಗ್​ ಪ್ರಾರಂಭವಾಯಿತು. ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಚಿತ್ರೀಕರಣ ಮಾಡಿದೆವು. ಕನ್ನಡದಲ್ಲಿ ಈಜಿಯಾಗಿ ಮಾಡುತ್ತಿದ್ದೆ. ಆದರೆ, ತೆಲುಗು ಶೂಟಿಂಗ್​ ಸಮಯದಲ್ಲಿ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೂ ತಂಡದ ಸಹಾಯದಿಂದ ಮಾಡಿದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ' ಎಂದು ಮಾಹಿತಿ ನೀಡುತ್ತಾರೆ.

ಪರಭಾಷೆಗಳಲ್ಲೂ ಬಿಜಿ

"ಪ್ರಾರಂಭ' ಚಿತ್ರದಲ್ಲಿ ಮನುರಂಜನ್​ ರವಿಚಂದ್ರನ್​ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಉತ್ತರ ಕರ್ನಾಟಕದ ಪ್ರತಿಭೆ ಜಾನ್ವಿಕಾ ಕಲಕೇರಿ, ಇದೀಗ ಕನ್ನಡದ ಜತೆಗೆ ತಮಿಳಿನಲ್ಲೂ ಬಿಜಿಯಾಗಿದ್ದಾರೆ. ಈಗಾಗಲೇ ಅವರು ನಟಿಸಿರುವ "ಅಕ್ಯೂಸ್ಡ್​' ಎಂಬ ತಮಿಳು ಸಿನಿಮಾ ರಿಲೀಸ್​ ಆಗಿದ್ದು, ಅದೇ ತಂಡದ ಜತೆ ಮತ್ತೊಂದು ಕಾಲಿವುಡ್​ ಚಿತ್ರದ ಮಾತುಕತೆ ನಡೆಯುತ್ತಿದೆ. "ರಾಧಿಕಾ ಮೇಡಂ ಮತ್ತು ಶ್ರೇಯಸ್​ ತಲ್ಪಾಡೆ ಅವರ ಜತೆ ಹಿಂದಿ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್​-ಪ್ರೊಡಕ್ಷನ್​ ನಡೆಯುತ್ತಿದೆ. ಹೈದರಾಬಾದ್​ನಲ್ಲೂ ನಾಲ್ಕೈದು ತೆಲುಗು ಸಿನಿಮಾಗಳ ಮಾತುಕತೆ ನಡೆಸಿ, ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಕನ್ನಡದಲ್ಲಿ ಎರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ. ಐತಿಹಾಸಿಕ ಪಾತ್ರಗಳು ನನಗೆ ತುಂಬ ಇಷ್ಟ, ಇದುವರೆಗೆ ಅಂತಹ ಪಾತ್ರ ಸಿಕ್ಕಿಲ್ಲ. ಮುಂದೆ ಸಿಕ್ಕರೆ ಖಂಡಿತ ಮಾಡುತ್ತೇನೆ' ಎಂದು ಹೇಳಿಕೊಳ್ಳುತ್ತಾರೆ.

ಉತ್ತರ ಕರ್ನಾಟಕ ಮಂದಿ ಹೆಚ್ಚು ಬರಬೇಕು

ಉತ್ತರ ಕರ್ನಾಟಕದ ಪ್ರತಿಭೆಗಳು ಚಿತ್ರರಂಗಕ್ಕೆ ಹೆಚ್ಚು ಬರಬೇಕು ಎನ್ನುವ ಜಾನ್ವಿಕಾ, "ಕರಾವಳಿ ಮತ್ತು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ, ಉತ್ತರ ಕರ್ನಾಟಕದ ಮಂದಿ ಚಿತ್ರರಂಗದಲ್ಲಿರುವುದು ಕಡಿಮೆ. ಮೊದಲು ಕನ್ನಡ ಉಚ್ಛಾರಣೆ ಸಮಸ್ಯೆ ಇರುತ್ತಿದ್ದ ಕಾರಣ ಹೆಚ್ಚು ಕಲಾವಿದರು ಬರುತ್ತಿರಲಿಲ್ಲ ಅಂತನ್ನಿಸುತ್ತದೆ. ಈಗ ಅಂತಹ ಸಮಸ್ಯೆಗಳಿಲ್ಲ. ನನಗೂ ಇದುವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಕನ್ನಡ ಮಾತ್ರವಲ್ಲ ತಮಿಳು, ತೆಲುಗಿನಲ್ಲೂ ಅವಕಾಶಗಳು ಬರುತ್ತಿವೆ' ಎನ್ನುತ್ತಾರೆ.