ಬೆಂಗಳೂರು: ನಟಿ ಸೋನಲ್ ಮೊಂತೆರೊ ಇತ್ತೀಚೆಗಷ್ಟೇ ‘ಡೆಮೋ ಪೀಸ್’ ಮೂಲಕ ಪ್ರೇಕ್ಷಕರೆದುರಿಗೆ ಆಗಮಿಸಿದ್ದರು. ಈಗ ಅವರ ‘ಲವ್ ಮ್ಯಾಟ್ರು’ ಬಿಚ್ಚಿಡಲು ಮನಸು ಮಾಡಿದ್ದಾರೆ. ಬರೀ ಅವರಷ್ಟೇ ಅಲ್ಲ, ಸೋನಲ್ ಜತೆಗೆ ಇನ್ನೂ ಮೂವರು ತಂತಮ್ಮ ಪ್ರೀತಿಯ ವಿಷಯವನ್ನು ಹೇಳಲಿದ್ದಾರೆ. ವಿರಾಟ್ ಎನ್. ನಿರ್ದೇಶನದ ‘ಲವ್ ಮ್ಯಾಟ್ರು’ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾ ಬಹುತೇಕ ಕೊನೆಯ ಹಂತದಲ್ಲಿದೆ.
ಈ ಚಿತ್ರದಲ್ಲಿ ಸುಮನ್ ರಂಗನಾಥ್, ಅನಿತಾ ಭಟ್ ಮತ್ತು ಸುಷ್ಮಿತಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಹಾಡೊಂದನ್ನು ಈ ತಂಡ ಬಿಡುಗಡೆ ಮಾಡಿಕೊಂಡಿತ್ತು. ಈ ಹಿಂದೆ ‘ದುನಿಯಾ’ ಸೂರಿ, ಪ್ರಶಾಂತ್ ನೀಲ್, ಕೆ.ಎಂ. ಚೈತನ್ಯ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿರಾಟ್, ಮೊದಲ ಬಾರಿ ‘ಲವ್ ಮ್ಯಾಟ್ರು’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಎಂಟ್ರಿ ಪಡೆದಿದ್ದಾರೆ.
ಮೊದಲ ಪ್ರಯತ್ನದಲ್ಲೇ ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯ ಕಥೆ ಆಯ್ದುಕೊಂಡು, ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಾಯಕರಾಗಿಯೂ ನಟಿಸುತ್ತಿದ್ದಾರೆ. ಚಿತ್ರದಲ್ಲಿನ ಐದು ಹಾಡುಗಳಿಗೆ ಶೇಡ್ರಾ್ಯಕ್ ಸಾಲ್ಮನ್ ಸಂಗೀತ ನೀಡಿದ್ದಾರೆ. ದೇವೇಂದ್ರ ಪರಮೇಶ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.