ಸಿನಿವಾಣಿ

ಪ್ರೈಮ್​ನಲ್ಲಿ ಮಾಕ್​ಟೇಲ್ ನೋಡಿ ದುಡ್ಡು ಕೊಟ್ಟರು

kumarvrl

ಬೆಂಗಳೂರು: ಸಿನಿಮಾ ಬಿಡುಗಡೆಯಾದ ಆರಂಭದಿಂದಲೂ ‘ಲವ್ ಮಾಕ್​ಟೇಲ್’ ಮತ್ತು ‘ದಿಯಾ’ ಚಿತ್ರಗಳಿಗೆ ಒಳ್ಳೇ ಪ್ರತಿಕ್ರಿಯ ವ್ಯಕ್ತವಾಗಿದೆ. ಆದರೆ, ಸದ್ಯಕ್ಕೆ ಆ ಚಿತ್ರಗಳನ್ನು ನೋಡಬೇಕೆಂದರೆ ಚಿತ್ರಮಂದಿರಗಳಲ್ಲಿ ಅವು ಲಭ್ಯವಿಲ್ಲ. ಹೀಗಿರುವಾಗಲೆ ಇವೇ ಸಿನಿಮಾಗಳು ಈಗ ಅಮೆಜಾನ್ ಪ್ರೈಮ್​ನಲ್ಲಿ ಸದ್ದು ಮಾಡುತ್ತಿವೆ. ಲಕ್ಷಾಂತರ ಜನರಿಂದ ವೀಕ್ಷಣೆ ಕಂಡಿವೆ. ಚಿತ್ರಮಂದಿರದಲ್ಲಿ ನೋಡಲಾರದವರು ಪ್ರೈಮ್​ನಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ‘ಇಂಥ ಒಳ್ಳೇ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲಿಲ್ಲ. ಮತ್ತೊಮ್ಮೆ ಮರು ಬಿಡುಗಡೆ ಸಾಧ್ಯವೇ?’ ಎಂದು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಪ್ರೈಮ್​ನಲ್ಲಿ ಸಿನಿಮಾ ನೋಡಿದ ಎಷ್ಟೋ ಜನ ಟಿಕೆಟ್ ಮೊತ್ತವನ್ನು ಚಿತ್ರತಂಡಕ್ಕೆ ನೀಡಲು ಮುಂದೆ ಬಂದಿದ್ದಾರೆ.

ಹೌದು, ಚಿತ್ರ ನೋಡಿದ ಹಲವರು, ‘ಡಾರ್ಲಿಂಗ್’ ಕೃಷ್ಣಗೆ ದುಡ್ಡು ಕಳುಹಿಸಿದ್ದಾರೆ. ‘ಮೊದಲಿಗೆ ನೂರು ಜನ ಮೆಸೇಜ್ ಮಾಡಿ, ಟಿಕೆಟ್ ಮೊತ್ತ ನೀಡಬೇಕೆಂದುಕೊಂಡಿದ್ದೇವೆ ಎಂದಿದ್ದರು. ನಾನು ಅದಕ್ಕೆ ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಮತ್ತೆ ಒಂದಷ್ಟು ಇಮೇಲ್​ಗಳು ಬಂದವು. ಟ್ವಿಟರ್​ನಲ್ಲಿ ಮೆಸೇಜ್ ಮಾಡಲು ಶುರುಮಾಡಿದರು. ಗೌರವದಿಂದ ಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ನಾನು ಮತ್ತು ಮಿಲನಾ ಚರ್ಚೆ ಮಾಡಿ ಯುಪಿಐ ಐಡಿ ಶೇರ್ ಮಾಡಿದೆ. ಸಾವಿರಕ್ಕೂ ಹೆಚ್ಚು ಜನ 10 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿವರೆಗೂ ಹಣ ಕಳುಹಿಸಿದ್ದಾರೆ. ಈ ಬೆಳವಣಿಗೆಯಿಂದ ಮತ್ತೊಂದು ಸಿನಿಮಾ ಮಾಡುವ ಸ್ಪೂರ್ತಿ ಸಿಕ್ಕಿದೆ. ಅದ್ಭುತವಾದ ಪ್ರೀತಿ ಇದೆನ್ನಬಹುದು’ ಎನ್ನುತ್ತಾರೆ ‘ಲವ್ ಮಾಕ್​ಟೇಲ್’ ಚಿತ್ರದ ನಾಯಕ, ನಿರ್ದೇಶಕ ಮತ್ತು ನಿರ್ವಪಕರೂ ಆಗಿರುವ ಡಾರ್ಲಿಂಗ್ ಕೃಷ್ಣ.

ಆದರೆ ‘ದಿಯಾ’ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ, ‘ನಾವು ಆ ರೀತಿ ಪೇಮೆಂಟ್ಸ್ ಸ್ವೀಕರಿಸುತ್ತಿಲ್ಲ. ಅಂಥದ್ದೇನಾದರೂ ಇದ್ದರೆ ನಾವೇ ಅಧಿಕೃತವಾಗಿ ತಿಳಿಸುತ್ತೇವೆ’ ಎಂದಿದ್ದಾರೆ.

ಮೀಮ್ಳಲ್ಲಿ ಮಿಂಚಿದ ದಿಯಾ ಮತ್ತು ನಿಧಿ: ಯಾವಾಗ ಅಮೆಜಾನ್ ಪ್ರೖೆಮ್ಲ್ಲಿ ‘ದಿಯಾ’ ಮತ್ತು ‘ಲವ್ ಮಾಕ್​ಟೇಲ್’ ಸಿನಿಮಾಗಳು ಬಿಡುಗಡೆ ಆದವೋ, ಆ ಕ್ಷಣದಿಂದಲೇ ಸಿನಿಮಾ ನೋಡುಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿತು. ಅದ್ಯಾವ ಮಟ್ಟಿಗೆ ಎಂದರೆ, ಆ ಎರಡು ಚಿತ್ರದ ಕುರಿತಾದ ಸಾಕಷ್ಟು ಮೀಮ್ಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದವು. ‘ದಿಯಾ’ ಚಿತ್ರದಲ್ಲಿ ಆದಿಯನ್ನು ಕಳೆದುಕೊಂಡ ದಿಯಾಗೂ, ‘ಲವ್ ಮಾಕ್​ಟೇಲ್’ ಸಿನಿಮಾದಲ್ಲಿ ನಿಧಿಯನ್ನು ಕಳೆದುಕೊಂಡ ಆದಿಗೂ ಮದುವೆ ಮಾಡಿಸಿ ಎಂಬಂತ ಮೀಮ್ಳು ನಗು ಉಕ್ಕಿಸಿದ್ದವು.

ರಿಮೇಕ್ ಬೇಡಿಕೆ

ಇತ್ತೀಚಿನ ದಿನಗಳಲ್ಲಿ ಕನ್ನಡದ ಹಲವು ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗುತ್ತಿವೆ. ಅದೇ ರೀತಿ ಇಲ್ಲಿನ ಕಂಟೆಂಟ್​ಗಳಿಗೆ ಬೇಡಿಕೆಯೂ ಬಂದಿದೆ. ಈಗ ‘ಲವ್ ಮಾಕ್​ಟೇಲ್’ ಚಿತ್ರಕ್ಕೂ ರಿಮೇಕ್ ಬೇಡಿಕೆ ಬಂದಿದೆ. ತಮಿಳು, ತೆಲುಗು ನಿರ್ವಪಕರು ರಿಮೇಕ್ ಹಕ್ಕು ಖರೀದಿಸಲು ಮುಂದೆ ಬಂದಿದ್ದು, ಸ್ವತಃ ಕೃಷ್ಣ ಅವರಿಗೆ ನಿರ್ದೇಶನ ಮಾಡುವಂತೆ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಕೃಷ್ಣ ಹೇಳುತ್ತಾರೆ.