ಚೆನ್ನೈ: ಲಾಕ್ಡೌನ್ಗೂ ಮುನ್ನ 'ಇಂಡಿಯನ್ 2' ಚಿತ್ರದಲ್ಲಿ ನಟಿಸುತ್ತಿದ್ದರು ಕಮಲ್ ಹಾಸನ್. ಈಗ ಲಾಕ್ಡೌನ್ ಮುಗಿಯುತ್ತಿದ್ದಂತೆಯೇ, ಸದ್ಯದಲ್ಲೇ ಆ ಚಿತ್ರದ ಬಾಕಿ ಇರುವ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ.
ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 'ಇವನೆಂದ್ರು ನಿನೈತ್ತಾಯ್' ಹೆಸರಿನ ಈ ಚಿತ್ರದಲ್ಲಿ ಅವರು ಹೀರೋ ಆಗಿ ನಟಿಸುತ್ತಿರುವುದಷ್ಟೇ ಅಲ್ಲ, ತಮ್ಮ ರಾಜಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಯಾರು ಗೊತ್ತಾ? ಕಾಲಿವುಡ್ನ ಅತ್ಯಂತ ಬೇಡಿಕೆಯ ನಿರ್ದೇಶಕರಾಗಿರುವ ಲೋಕೇಶ್ ಕನಕರಾಜ್. ಸದ್ಯ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರವನ್ನು ಮುಗಿಸಿ ಬಿಡುಗಡೆಗೆ ಕಾಯುತ್ತಿರುವ ಲೋಕೇಶ್, ಲಾಕ್ಡೌನ್ ಸಮಯದಲ್ಲಿ ಒಂದು ಕಥೆ ಮಾಡಿ ಕಮಲ್ ಹಾಸನ್ಗೆ ಹೇಳಿದ್ದಾರೆ. ಕಥೆ ಕೇಳಿ ಇಂಪ್ರೆಸ್ ಆಗಿರುವ ಕಮಲ್, ತಮ್ಮ 232ನೇ ಚಿತ್ರದ ಜವಾಬ್ದಾರಿಯನ್ನು ಲೋಕೇಶ್ಗೆ ಕೊಟ್ಟಿದ್ದಾರೆ.
ಲೋಕೇಶ್, ತಮಿಳು ಚಿತ್ರರಂಗದಲ್ಲಿ ಬೆಳೆಯುತ್ತಿರುವ ರೀತಿ ನಿಜಕ್ಕೂ ಹಲವರಿಗೆ ಆಶ್ಚರ್ಯ ಹುಟ್ಟಿಸಿದೆ. 2017ರಲ್ಲಿ 'ಮಾನಗರಂ' ಎಂಬ ಚಿತ್ರ ನಿರ್ದೇಶಿಸಿದ್ದ ಅವರು, ಮೊದಲ ಚಿತ್ರದಲ್ಲೇ ಯಶಸ್ಸು ನೋಡಿದವರು. ಆ ನಂತರ, ಕಳೆದ ವರ್ಷ ಬಿಡುಗಡೆಯಾದ ಅವರದೇ ನಿರ್ದೇಶನದ 'ಖೈದಿ' ಸೂಪರ್ ಹಿಟ್ ಆಯಿತು. ಈ ಚಿತ್ರ ಮುಗಿಯುತ್ತಿದ್ದಂತೆಯೇ ಅವರಿಗೆ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ 'ಮಾಸ್ಟರ್' ನಿರ್ದೇಶಿಸುವ ಅವಕಾಶ ಸಿಕ್ಕಿತು.
'ಮಾಸ್ಟರ್' ಬಿಡುಗಡೆ ಆಗುವುದಕ್ಕೆ ಮುಂಚೆಯೇ, ಲೋಕೇಶ್ಗೆ ಕಮಲ್ ಹಾಸನ್ ಅವರಂತಹ ದೊಡ್ಡ ನಟರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ. 'ಇವನೆಂದ್ರು ನಿನೈತ್ತಾಯ್' ಚಿತ್ರವು 2021ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಚಿತ್ರದಲ್ಲಿ ಅವರು ಏನೆಲ್ಲಾ ಕಮಾಲ್ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.