ಸಿನಿವಾಣಿ

ಬುಲೆಟ್ ಪ್ರಕಾಶ್ ಅಂತಿಮ ದರ್ಶನಕ್ಕೆ ಬ್ರೇಕ್ ಹಾಕಿದ ಲಾಕ್​ಡೌನ್

ಬೆಂಗಳೂರು: ಸೋಮವಾರ ನಿಧನರಾದ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಹೆಬ್ಬಾಳದ ಚಿತಾಗಾರದಲ್ಲಿ ನಡೆಯಿತು. ಕೆಲವೇ ಮಂದಿಯ ಸಮ್ಮುಖದಲ್ಲಿ ಪ್ರಕಾಶ್ ಅವರ ಅಂತ್ಯಕ್ರಿಯೆ ಮಾಡಲಾಯಿತು.

ಸಾಮಾನ್ಯವಾಗಿ ಜನಪ್ರಿಯ ಕಲಾವಿದರು ನಿಧನರಾದ ಸಂದರ್ಭದಲ್ಲಿ, ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಸಾವಿರಾರು ಜನ ಜಮಾಯಿಸುವುದಿದೆ. ಅದರಲ್ಲೂ ಪ್ರಕಾಶ್ ಅವರ ಸ್ನೇಹಿತರ ವಲಯ ಬಹಳ ದೊಡ್ಡದು. ಆದರೆ, ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಬಂದಿದ್ದ ಜನ ಬಹಳ ಕಡಿಮೆ. ಅದಕ್ಕೆ ಕಾರಣ ಲಾಕ್​ಡೌನ್. ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆಯಬೇಕೆಂದು ಹಲವರಿಗೆ ಇತ್ತಾದರೂ, ಲಾಕ್​ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ.

ಇದರ ನಡುವೆಯೂ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆದವರೆಂದರೆ, ಅದು ನಟ ‘ದುನಿಯಾ’ ವಿಜಯ್. ಮಿಕ್ಕಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ವಪಕರಾದ ಎಂ.ಜಿ. ರಾಮಮೂರ್ತಿ, ಉಮೇಶ್ ಬಣಕಾರ್ ಮುಂತಾದವರು, ಅಂತ್ಯಸಂಸ್ಕಾರದ ವೇಳೆ ಹಾಜರಿದ್ದು, ಬುಲೆಟ್ ಪ್ರಕಾಶ್ ಅವರ ಕುಟುಂಬದವರಿಗೆ ನೆರವಾದರು.

ಬುಲೆಟ್ ಸಾವಿಗೆ ಸೋಷಿಯಲ್ ಮೀಡಿಯಾದಲ್ಲಿ ಕಂಬನಿ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದಿರುವವರೆಲ್ಲ, ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರಮುಖವಾಗಿ ತಮ್ಮ ಗೆಳೆಯನನ್ನು ಕಳೆದುಕೊಂಡ ನೋವಿನಲ್ಲಿ ದರ್ಶನ್ ಅವರು, ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಸುದೀಪ್ ಸಹ ತಮ್ಮ ಅಗಲಿದ ಗೆಳೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬ ವಿಷಯ ಕೇಳಿ ಬಹಳ ನೋವಾಗಿದೆ. ಅದಕ್ಕಿಂತ ನೋವಿನ ಸಂಗತಿ ಎಂದರೆ, ಅವರ ಅಂತಿಮ ದರ್ಶನ ಪಡೆಯುವುದಕ್ಕೂ ಚಿತ್ರರಂಗದ ಸ್ನೇಹಿತರಿಗೆ ಸಾಧ್ಯವಾಗುತ್ತಿಲ್ಲ. ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ಗಣೇಶ್, ಆದಿತ್ಯ, ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಬುಲೆಟ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.