Politicians Kids in Films
Politicians Kids in Films -
ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ರಾಜಕೀಯ ಕಾರ್ಯಕ್ರಮಗಳು, ಚುನಾವಣೆ ವೇಳೆ ರಾಜಕಾರಣಿಗಳು ಸಿನಿಮಾ ತಾರೆಯರನ್ನು ಕರೆಸುವುದು, ಸಿನಿಮಾ ಮುಹೂರ್ತ, ಟ್ರೇಲರ್, ಆಡಿಯೋ ಬಿಡುಗಡೆಗಳಿಗೆ ರಾಜಕಾರಣಿಗಳನ್ನು ಕರೆಸುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ರಾಜಕಾರಣಿಗಳ ಕುಟುಂಬದಲ್ಲೇ ಸಿನಿಮಾ ತಾರೆಯರು ಸೃಷ್ಟಿಯಾದ ಉದಾಹರಣೆಗಳೂ ಇವೆ. ಇದೀಗ ಈ ಸಾಲಿಗೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್ ಹೊಸ ಸೇರ್ಪಡೆ. ರಾಜಕಾರಣದಲ್ಲಿ ಸಕ್ರಿಯರಾಗುವ ಮುನ್ನ ಸಿಪಿವೈ "ಸೈನಿಕ', "ಶಿವಪ್ಪ ನಾಯಕ', "ಬದ್ರಿ' ಸೇರಿ ಏಳೆಂಟು ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರ ಪುತ್ರ ಧ್ಯಾನ್ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದು, "ಸೈನಿಕ 2' ಮತ್ತೊಂದು "ಕರ್ಣಾಟಬಲಂ' ಇಂದು ಸೆಟ್ಟೇರಲಿವೆ. "ಸೈನಿಕ' ಸೀಕ್ವೆಲ್ನಲ್ಲಿ ಧ್ಯಾನ್ ಜತೆ ಯೋಗೇಶ್ವರ್ ಕೂಡ ನಟಿಸುತ್ತಿದ್ದು "ಉಗ್ರಾಯುಧಂ' ಖ್ಯಾತಿಯ ಪುನೀತ್ ರುದ್ರನಾಗ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇನ್ನು "ಕರ್ಣಾಟಬಲಂ' ಐತಿಹಾಸಿಕ ಮತ್ತು ಸಾಮಾಜಿಕ ಎರಡು ಟ್ಟಗಳಲ್ಲಿ ಸಾಗುವ ಕಥೆಯಾಗಿದ್ದು, ಎರಡು ಲುಕ್ಗಳಲ್ಲಿ ಧ್ಯಾನ್ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಚಿತ್ರರಂಗಕ್ಕೆ ಬರಲೆಂದೇ ಧ್ಯಾನ್ ನಟನಾ ತರಬೇತಿಯ ಜತೆ ಡಾನ್ಸ್, ಕುದುರೆ ಸವಾಲಿ, ಸಮರ ಕಲೆ ಕಲಿತಿದ್ದು, ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡು ಭರ್ಜರಿಯಾಗೇ ತಯಾರಿ ಮಾಡಿಕೊಂಡಿದ್ದಾರೆ.
ದಳಪತಿ ನಿಖಿಲ್
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕೂಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. "ಜಾಗ್ವಾರ್' ಮೂಲಕ 2016ರಲ್ಲಿ ನಾಯಕನಾಗಿ ಡೆಬ್ಯೂ ಮಾಡಿದ ಅವರು ನಂತರ "ಸೀತಾರಾಮ ಕಲ್ಯಾಣ', "ಕುರುಕ್ಷೇತ್ರ' ಚಿತ್ರಗಳಲ್ಲಿ ನಟಿಸಿದ್ದಾರೆ. 2021ರ "ರೈಡರ್' ಬಳಿಕ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿರುವ ಅವರು, ಎರಡು ಚಿತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದ್ದರೂ, ಸದ್ಯ ಅಧಿಕೃತ ಘೋಷಣೆಯಾಗಿಲ್ಲ.
"ಜೂನಿಯರ್' ರೆಡ್ಡಿ ಸಂಚಲನ
ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ "ಜೂನಿಯರ್' ಮೂಲಕ ಕಳೆದ ವರ್ಷ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲಿಯೇ ಡಾನ್ಸ್, ಸ್ಟಂಟ್ಸ್ ಜತೆಗೆ ನಟನೆಯ ಮೂಲಕವೂ ಗಮನ ಸೆಳೆದಿರುವ ಅವರು, ಸದ್ಯ ಕಥೆಗಳನ್ನು ಕೇಳುತ್ತಿದ್ದು, ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಘೋಷಣೆಯಾಗಲಿದೆ ಎನ್ನಲಾಗಿದೆ.
ಕಲ್ಟ್ ಜೈದ್
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ "ಬನಾರಸ್' (2022) ಮೂಲಕ ಡೆಬ್ಯೂ ಚಿತ್ರದಲ್ಲೇ ಪ್ಯಾನ್ ಇಂಡಿಯಾ ಸವಾರಿ ಮಾಡಿದ್ದರು. ಆ ಬಳಿಕ ಈ ವರ್ಷ "ಕಲ್ಟ್'ನಲ್ಲಿ ಮಿಂಚಿದ್ದ ಅವರು, ಸದ್ಯ ಹೊಸ ಚಿತ್ರಕ್ಕಾಗಿ ಸಿದ್ಧತೆಯಲ್ಲಿದ್ದಾರೆ.
ಸಚಿನ್ ಸಿನಿಮಾಕೃಷಿ
ಕೃಷಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್ ಕೂಡ ರಾಜಕಾರಣದ ಜತೆಜತೆಗೆ ಸಿನಿಮಾರಂಗದಲ್ಲೂ ಸಕ್ರಿಯರಾಗಿದ್ದಾರೆ. "ಹ್ಯಾಪಿ ರ್ಬತ್ಡೇ' (2016) ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಅವರು ನಂತರ ಗ್ಯಾಪ್ ತೆಗೆದುಕೊಂಡು "ಬೆಂಗಳೂರು ಬಾಯ್ಸ್'ನಲ್ಲಿ (2023) ನಟಿಸಿದ್ದರು. ಕಳೆದ ವರ್ಷ "ಕಮಲ್ ಶ್ರೀದೇವಿ' ಚಿತ್ರದ ಮೂಲಕ ನಟನೆಯ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಅವರು, ಸದ್ಯ ಹೊಸ ಸಿನಿಮಾ ಸಿದ್ಧತೆಯಲ್ಲಿದ್ದಾರೆ.
ಚಿತ್ರರಂಗದಲ್ಲಿ ಅನೂಪ್ "ಹೈಡ್ ಆ್ಯಂಡ್ ಸೀಕ್'
ನಿಖಿಲ್, ಸಚಿನ್ರಂತೆಯೇ 2016ರಲ್ಲೇ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಪುತ್ರ ಅನೂಪ್. "ಲಕ್ಷ$್ಮಣ' ಬಳಿಕ "ನಾ ಪಂಟ ಕಣೋ' (2017), "ಕಬ್ಜಾ' (2023), "ಹೈಡ್ ಆ್ಯಂಡ್ ಸೀಕ್' (2024) ಚಿತ್ರಗಳಲ್ಲಿ ನಟಿಸಿರುವ ಅವರು, ಸದ್ಯ "ಕನಕರಾಜ' ಎಂಬ ಹೊಸ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.
ದುಷ್ಯಂತ್ ಗತವೈಭವ
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪುತ್ರ ದುಷ್ಯಂತ್ "ಗತವೈಭವ' (2025) ಮೂಲಕ ನಾಯಕನಾಗಿ ಡೆಬ್ಯೂ ಮಾಡಿ, ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು. ಅವರು ಸದ್ಯ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಇದ್ದಾರೆ...
ಮಾಜಿ ಸಚಿವ ವರ್ತೂರ್ ಪ್ರಕಾಶ್ ಪುತ್ರ ತೇಜಸ್, ಕಾಲೇಜು ದಿನಗಳಲ್ಲೇ "ಬಿಸ್ಕೆಟ್' ಎಂಬ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ. 2013ರಲ್ಲಿ ಆ ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಆ ಬಳಿಕ ತೇಜಸ್ ಮತ್ತೆ ಚಿತ್ರರಂಗದಲ್ಲಿ ಮುಂದುವರಿಯಲಿಲ್ಲ. ಇನ್ನು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕುಮಾರ್ ಬಂಗಾರಪ್ಪ, ರಾಜಕಾರಣಕ್ಕೆ ಎಂಟ್ರಿಯಾದ ಬಳಿಕ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದರು. "ಚಕ್ರವ್ಯೂಹ' ಮೂಲಕ ಕಮ್ಬ್ಯಾಕ್ ಮಾಡಿದ್ದ ಅವರು, ಸದ್ಯ "ಸರ್ಕಾರಿ ನ್ಯಾಯಬೆಲೆ ಅಂಗಡಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಅವರ ಪುತ್ರ ಅರ್ಜುನ್ ಕೂಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜಗ್ಗೇಶ್ ಪುತ್ರರಾದ ಯತಿರಾಜ್ ಮತ್ತು ಗುರುರಾಜ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಪುತ್ರ ಓಂ ಪ್ರಕಾಶ್ ನಾಯಕ್ (ಒಂದು ಕೊಲೆಯ ಸುತ್ತ) ಸಿನಿಮಾ ಮಾಡಿದ್ದಾರೆ.