ಸಿನಿವಾಣಿ

ನವೆಂಬರ್ ಅಷ್ಟೇ ಅಲ್ಲ, ಪ್ರತಿದಿನದ ಕನ್ನಡಿಗರಾಗೋಣ: ಹಿರಿಯ ನಟ ಸುಚೇಂದ್ರ ಪ್ರಸಾದ್ ಲೇಖನ

ಸುಚೇಂದ್ರ ಪ್ರಸಾದ್, ಹಿರಿಯ ನಟ

ಭಾಷೆ ಎಂದರೆ ಕೇವಲ ಅಭಿವ್ಯಕ್ತಿ ಸಂವಹನ ಸಾಧನವಲ್ಲ. ಅದು ಸಂಸ್ಕೃತಿ, ಪರಂಪರೆ ಜತೆಗೆ ಎಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿರುತ್ತದೆ. ಅಂತಹ ಚರಿತ್ರೆ ಕನ್ನಡಕ್ಕಿದೆ. ಏಕೀಕರಣ ಸೇರಿ ಕನ್ನಡ ಕಟ್ಟುವಲ್ಲಿ ಅನೇಕರ ಪರಿಶ್ರಮವಿದೆ. ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾವ್, ಅ.ನ.ಕೃಷ್ಣರಾಯರು, ಪಾಟೀಲ್ ಪುಟ್ಟಪ್ಪ ಸೇರಿ ಅನೇಕ ಪ್ರಾತಃ ಸ್ಮರಣೀಯರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು. ಆದರೆ, ಇಂತಹ ಮಹೋನ್ನತ ವ್ಯಕ್ತಿಗಳನ್ನು ನಾವೆಷ್ಟು ಸ್ಮರಿಸುತ್ತಿದ್ದೇವೆ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಭಾಷೆಗಾಗಿ ಹೋರಾಟ ಮಾಡಿದವರ ಅನುಭವದ ಒರತೆಯು ಪ್ರಸ್ತುತ ಕೊರತೆಯಾಗಿ ಕಾಣಿಸುತ್ತಿದೆ. ಕೇವಲ ನವೆಂಬರ್ ಮಾಸದಲ್ಲಿ ಮಾತ್ರ ಕನ್ನಡ ಎನ್ನಬಾರದು. ಪ್ರತಿ ದಿನ, ಪ್ರತಿ ಉಸಿರು ಕನ್ನಡವಾಗಿರಬೇಕು. ಹಾಗೆಂದೂ, ಅದು ಪ್ರದರ್ಶನದ ಸರಕಾಗದೆ, ದರ್ಶನವಾಗಬೇಕು. ಪ್ರಜ್ಞಾಪೂರ್ವಕವಾಗಿ ನಾವೇ ಕನ್ನಡದ ಬಗ್ಗೆ ಅರ್ಥಮಾಡಿಕೊಂಡು ಬಳಸಬೇಕು. ಎಷ್ಟು ಮನೆಯಲ್ಲಿ ನಿಘಂಟುಗಳಿವೆ. ಈಗ ಮಾತೃಭಾಷೆಯ ಕುರಿತಂತೆ ಶಬ್ದಗಳ ಹುಡುಕಾಟದ ಮನೋಭಾವ ಇಲ್ಲದಂತಾಗಿದೆ. ಮಹೋನ್ನತ ವ್ಯಕ್ತಿಗಳು ನಮ್ಮಲ್ಲಿ ಎಷ್ಟು ಜಾಗೃತಿ ಮೂಡಿಸಿದರೂ, ನಾವು ಮಾತ್ರ ಕನ್ನಡ ಮಾತನಾಡದೆ, ಅಧ್ಯಯನ ನಡೆಸದೆ ಅಸಡ್ಡೆ ವಹಿಸುತ್ತಿರುವುದು ಬೇಸರದ ವಿಚಾರ. ಇಂತಹ ಕಾಲದಲ್ಲಿರುವಾಗ ಕನಿಷ್ಠ ನವೆಂಬರ್‌ನಲ್ಲಾದರೂ ರಾಜ್ಯೋತ್ಸವ ಆಚರಿಸುತ್ತಾರೆ ಎನ್ನುವುದು ಸಮಾಧಾನದ ಸಂಗತಿ. ನಮ್ಮ ನಾಡಿನಲ್ಲಿಯೇ ನಾವೇ ಪರಕೀಯರಾಗುತ್ತಿದ್ದೇವೆ. ನಮ್ಮನ್ನು ಆಳುವ ನಾಯಕರು, ರಾಜಕಾರಣಿಗಳು ಸೇರಿ ನಾವೆಲ್ಲ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿದ್ದೇವೆ ಅನಿಸುತ್ತದೆ. ಕನ್ನಡ ರಾಜ್ಯೋತ್ಸವ ಎಂದರೆ ಕೇವಲ ಒಂದು ದಿನ ಆಚರಣೆ ಮಾಡಿ, ಹುಚ್ಚೆದ್ದು ಕುಣಿದು ಬಿಡುವುದಲ್ಲ. ಬದಲಾಗಿ ಕನ್ನಡದ ಕಾಯಕ ನಿತ್ಯ ನಿರಂತರ. ರಾಜ್ಯೋತ್ಸವವನ್ನು 69, 70 ಎಂದು ಸಂಖ್ಯೆಯಲ್ಲಿ ಬಿಂಬಿಸುವುದಕ್ಕಿಂತ ನಿಜವಾದ ಕನ್ನಡತನ ಬಳಕೆಯಲ್ಲಿ, ಓದುವುದಲ್ಲಿರುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಣದಲ್ಲಿ ಮಾತೃಭಾಷೆ ಮೊದಲ ಆದ್ಯತೆಯಾಗಬೇಕು ವಿನಾಃ ಐಚ್ಛಿಕವಾಗಬಾರದು. ಮನೆಯಿಂದಲೇ ಕನ್ನಡ ಮಾತನಾಡುವ ವಾತಾವರಣ ನಿರ್ಮಾಣವಾದಾಗ ನಮ್ಮ ಮಕ್ಕಳು ಅದನ್ನೇ ಮಾತನಾಡುತ್ತಾರೆ. ಕನ್ನಡ ಮಾತನಾಡಿದರೆ, ಶಾಲೆಯಲ್ಲಿ ದಂಡ ಶುಲ್ಕ ವಿಧಿಸುವ ನಿಯಮದ ಬಗ್ಗೆ ಕೇಳಿದರೆ, ನನಗೆ ಭಯವಾಗುತ್ತದೆ. ನನ್ನದೇ ನೆಲದಲ್ಲಿ ನನ್ನ ಮಗು ಮಾತೃಭಾಷೆ ಮಾತನಾಡಬಾರದು ಎಂದರೆ ಹೇಗೆ?. ಇನ್ನು ಕನ್ನಡದ ಬಗ್ಗೆ ಘಂಟಾೋಷವಾಗಿ ಭಾಷಣ ನೀಡುವವರು, ಮೇಜು ಕುಟ್ಟಿ ಮಾತನಾಡುವವರು ಕ್ರಮವಹಿಸದೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸದೆ ಇರದು. ಯುವಕರು ಆಧುನೀಕರಣಕ್ಕೆ ಮಾರುಹೋಗಿ ಭಾಷೆಯ ಸೊಗಡು ಮರೆಯಬಾರದು. ಹಿರಿಯರು ಬಿಟ್ಟುಹೋದ ಆಸ್ತಿ ಎಂಬ ಭಾವ ಇಲ್ಲದೆ ಹೋದರೆ, ಭಾಷೆ ಹೇಗೆ ಉಳಿಯುತ್ತದೆ. ಅದಕ್ಕೆ ಭಾಷೆಯ ಬಗ್ಗೆ ಭಾವ ಇರಲಿ. ಬಳಕೆಯಾಗಲಿ. ಸಂಭ್ರಮದ ಕಾರಣಕ್ಕಾಗಿ ದುಂದುವೆಚ್ಚ ಮಾಡುವುದಕ್ಕಿಂತ ಹಾಗೂ ಗಲಾಟೆ, ಗದ್ದಲ ಆಗುವುದಕ್ಕಿಂತ ಕನ್ನಡ ಭಾಷೆ ಕುರಿತಾಗಿ ಚಿಂತನ-ಮಂಥನ ಆಗಬೇಕಿದೆ. ‘ಎಲ್ಲಾದರೂ ಇರು, ಎಂತಾದರೂ ಇರು’ ಎಂಬ ಕವಿವಾಣಿಯನ್ನು ಸ್ಮರಿಸುತ್ತ ಪ್ರತಿ ದಿನ ರಾಜ್ಯೋತ್ಸವ ಜತೆಗೆ ಕನ್ನಡಿಗರಾಗಿರೋಣ ಎಂದೇ ಆಶಿಸುತ್ತೇನೆ.