ಇದುವರೆಗೆ ಸಾಮಾನ್ಯವಾಗಿ ತಮ್ಮ ದನಿಯಿಂದಲೇ ಗಮನ ಸೆಳೆಯುತ್ತಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇದೀಗ ದಾನದಿಂದಲೂ ಗಮನ ಸೆಳೆದಿದ್ದಾರೆ. ಅಂದರೆ, ಅವರು ತಮ್ಮ ಮನೆಯನ್ನೇ ದಾನವಾಗಿ ನೀಡಿದ್ದು, ಅದಿನ್ನು ವೇದಶಾಲೆಯಾಗಿ ಪರಿವರ್ತನೆ ಆಗಲಿದೆ. ನೆಲ್ಲೂರಿನ ತಿಪ್ಪರಾಜುವರಿ ಬೀದಿಯಲ್ಲಿರುವ ತಮ್ಮ ಮನೆಯನ್ನು ಅವರು ಕಂಚಿ ಕಾಮಕೋಟಿ ಪೀಠಕ್ಕೆ ದಾನ ಮಾಡಿದ್ದಾರೆ.
ಮಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರನ್ನು ಮನೆಗೆ ಆಹ್ವಾನಿಸಿದ ಎಸ್ಪಿಬಿ ಮನೆಯನ್ನು ಅವರಿಗೆ ದಾನವಾಗಿ ಅರ್ಪಿಸಿದ್ದಾರೆ. ದಾನವಾಗಿ ಸ್ವೀಕರಿಸಿರುವ ಮನೆಯನ್ನು ವೇದಶಾಲೆಯಾಗಿ ಬಳಸುವುದಾಗಿ ನುಡಿದ ಸ್ವಾಮೀಜಿ, ಎಸ್ಪಿಬಿ ಅವರ ತಂದೆ ಶ್ರೀಪತಿ ಪಂಡಿತಾರಾಧ್ಯುಲ ಸಾಂಬಾಮೂರ್ತಿ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ತಮ್ಮ ಮನೆ ವೇದಶಾಲೆ ಆಗಲಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಎಸ್ಪಿಬಿ, ಕಂಚಿ ಕಾಮಕೋಟಿ ಪೀಠ ತಮ್ಮ ಮನೆಯನ್ನು ಒಂದೊಳ್ಳೆಯ ಉದ್ದೇಶಕ್ಕಾಗಿ ಬಳಕೆ ಆಗುವಂತೆ ಮಾಡಲು ಅವಕಾಶ ಕೊಟ್ಟಿರುವುದು ತಮ್ಮ ಸೌಭಾಗ್ಯ ಎಂದು ಹೇಳಿಕೊಂಡಿದ್ದಾರೆ. -ಏಜೆನ್ಸೀಸ್