ಮುಂಬೈ: ಅಕ್ಷಯ್ ಕುಮಾರ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಲಕ್ಷ್ಮೀ ಬಾಂಬ್‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಆರು ತಿಂಗಳಿಂದ ಲಾಕ್ಡೌನ್ ಘೋಷಣೆ ಆಗಿದ್ದರಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡು, ಸಿನಿಮಾ ಕ್ಷೇತ್ರಕ್ಕೆ ಭಾರೀ ನಷ್ಟವಾಗಿತ್ತು. ಬಳಿಕ ಒಂದಷ್ಟು ಮಂದಿ ನೇರವಾಗಿ ಓಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಿ ಗೆದ್ದರು. ಇದೀಗ ಅದೇ ಹಾದಿಯಲ್ಲಿ ಅಕ್ಷಯ್ ಕುಮಾರ್ ಸಹ ಆಗಮಿಸುತ್ತಿದ್ದು, ಲಕ್ಷ್ಮೀ ಬಾಂಬ್ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿತ್ತು. ಇದೀಗ ಟ್ರೇಲರ್ ಸಹ ರಿಲೀಸ್ ಆಗಿದೆ.
ಕಾಮಿಡಿ ಮೂಲಕವೇ ತೆರೆದುಕೊಳ್ಳುವ ಟ್ರೇಲರ್ನಲ್ಲಿ ಅಕ್ಷಯ್ ಕುಮಾರ್ ಅವರ ಹಲವು ಅವತಾರಗಳನ್ನು ಕಣ್ತುಂಬಿಕೊಳ್ಳಬಹುದು. ಭಯ ಹುಟ್ಟಿಸುವ ಕೆಲಸವನ್ನೂ ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ. ಅಂದಹಾಗೆ, ರಾಘವ್ ಲಾರೆನ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ತಮಿಳಿನ ಕಾಂಚನಾ ಚಿತ್ರದ ರಿಮೇಕ್. ಮೂಲ ಸಿನಿಮಾದಲ್ಲಿ ರಾಘವ್ ನಿಭಾಯಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ ವೇದಿಕೆಯಲ್ಲಿ ನವೆಂಬರ್ 9ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.
ಸುಶಾಂತ್ ಸಿಂಗ್ ರಜಪೂತ್ ನಟನೆಯ ದಿಲ್ ಬೇಚಾರ, ಆಲಿಯಾ ಭಟ್ ನಟನೆಯ ಸಡಕ್ 2 ಸಿನಿಮಾಗಳು ಈಗಾಗಲೇ ಹಾಟ್ಸ್ಟಾರ್ನಲ್ಲಿ ತೆರೆಕಂಡಿವೆ. ಅಜಯ್ ದೇವಗನ್ ನಾಯಕತ್ವದ ಭುಜ್, ಅಭಿಷೇಕ್ ಬಚ್ಚನ್ ಅವರ ಬಿಗ್ ಬುಲ್ ಸಹ ಇನ್ನೇನು ಬಿಡುಗಡೆ ದಿನಾಂಕವನ್ನು ಘೋಷಿಸಿಕೊಳ್ಳಲಿವೆ. (ಏಜೆನ್ಸೀಸ್)