ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ಯಾನ್ ಇಂಡಿಯಾ ಪರಿಕಲ್ಪನೆ ವೇಗ ಪಡೆದ ಬಳಿಕ ಬಹುಕೋಟಿ ವೆಚ್ಚದ ಬಹುಭಾಷಾ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾದಿಂದ ಪ್ಯಾನ್ ವರ್ಲ್ಡ್ಗೆ ಹೋಗಲು ಸ್ಟಾರ್ಗಳು ಸಹ ನಾ ಮುಂದು ತಾ ಮುಂದು ಅಂತ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿಯೇ ಬಿಗ್ಸ್ಕ್ರೀನ್ ಮೇಲೆ ದೃಶ್ಯವೈಭವ ಸೃಷ್ಟಿಸಲು ವಿಎ್ಎಕ್ಸ್, ಸಿಜಿಐ, ಎಐ ಮಾತ್ರವಲ್ಲ ಕೋಟಿ ಕೋಟಿ ವೆಚ್ಚದಲ್ಲಿ ಸೆಟ್ಗಳನ್ನೂ ನಿರ್ಮಿಸಲಾಗುತ್ತಿದೆ. ಮೊದಲೆಲ್ಲ ಒಂದೆರಡು ಕೋಟಿ ಸೆಟ್ ಅಂದರೆ ಅಬ್ಬಾ ಎನ್ನುವ ಕಾಲವಿತ್ತು. ಇದೀಗ ಸೆಟ್ಗಾಗಿಯೇ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂಪಾಯಿಯಿಂದ 50 ಕೋಟಿ ರೂಪಾಯಿವರೆಗೆ ಖರ್ಚು ಮಾಡುತ್ತಿದ್ದಾರೆ.
ಪ್ರಭಾಸ್, ಸಂಜಯ್ ದತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಫ್ಯಾಂಟಸಿ ಹಾರರ್ "ದ ರಾಜಾಸಾಬ್' ಚಿತ್ರಕ್ಕಾಗಿ ಹೈದರಾಬಾದ್ನಿಂದ 20 ಕಿಮೀ ದೂರದಲ್ಲಿರುವ ಅಜೀಜ್ನಗರದಲ್ಲಿ ದೊಡ್ಡ ಸೆಟ್ ನಿರ್ಮಿಸಲಾಗಿದೆ. ಚಿತ್ರತಂಡದ ಪ್ರಕಾರ ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತಿ ದೊಡ್ಡ ಬಜೆಟ್ನ ಹಾರರ್ ಚಿತ್ರಕ್ಕೆ ವಿಶ್ವದ ಅತಿ ದೊಡ್ಡ ಒಳಾಂಗಣ ಸೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿ ಆ್ಯಕ್ಷನ್ -ಕಟ್ ಹೇಳುತ್ತಿರುವ ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ನಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ. ಕಲಾ ನಿರ್ದೇಶಕ ರಾಜೀವ್ ನಂಬಿಯಾರ್ ಅಜೀಜ್ನಗರದಲ್ಲಿ ಬರೋಬ್ಬರಿ 38 ಸಾವಿರ ಚದರಡಿಯಲ್ಲಿ ಬೃಹತ್ ಸೆಟ್ ನಿರ್ಮಿಸಿದ್ದಾರೆ. ಎರಡು ಮಹಡಿಯ ಈ ಸೆಟ್ ಒಂದು ಹಳೆಯ ಬಂಗಲೆ, ಲೈಬ್ರರಿ, ಅಡುಗಮನೆ, ಊಟದ ಮನೆ, ಟಾರ್ಚರ್ ರೂಮ್ಗಳನ್ನು ಒಳಗೊಂಡಿದೆ. ಸೆಟ್ ಬಗ್ಗೆ ರಾಜೀವ್, "ಕಳೆದ ನಾಲ್ಕರಿಂದ ಆರು ತಿಂಗಳಿನಿಂದ 1000ರಿಂದ 1200 ಜನ ಹಗಲು, ರಾತ್ರಿ ಎನ್ನದೆ ಕೆಲಸ ಮಾಡಿ ಈ ಬೃಹತ್ ಸೆಟ್ ನಿರ್ಮಿಸಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ಇನ್ಡೋರ್ ಸೆಟ್ ಇದು' ಎಂದು ಹೇಳಿಕೊಳ್ಳುತ್ತಾರೆ. ಈಗಾಗಲೇ ಚಿತ್ರದ ಶೇಕಡಾ 90ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, "ದ ರಾಜಾಸಾಬ್' ಇದೇ ಡಿ. 5ರಂದು ತೆರೆಗೆ ಬರಲಿದೆ.
ವಿರಾಟ್ ಕರ್ಣ, ನಭಾ ನಟೇಶ್ ಮತ್ತು ಐಶ್ವರ್ಯಾ ಮೆನನ್ ನಟಿಸುತ್ತಿರುವ ಅಭಿಷೇಕ್ ನಾಮಾ ಆ್ಯಕ್ಷನ್&ಕಟ್ ಹೇಳುತ್ತಿರುವ ಪೌರಾಣಿಕ ಹಿನ್ನೆಲೆಯ ಸಿನಿಮಾ "ನಾಗಬಂಧಂ'. ಈ ಚಿತ್ರಕ್ಕಾಗಿ ಹೈದರಾಬಾದ್ನ ರಾಮಾನಾಯ್ಡು ಸ್ಟುಡಿಯೋಸ್ನಲ್ಲಿ "ಒಕ್ಕಡು', "ಆರುಂಧತಿ', "ಯಶೋದ' ಖ್ಯಾತಿಯ ಹಿರಿಯ ಕಲಾ ನಿರ್ದೇಶಕ ಅಶೋಕ್ ಕುಮಾರ್ 10 ಕೋಟಿ ರೂ. ಬಜೆಟ್ನಲ್ಲಿ ಕೇರಳದ ಅನಂತಪದ್ಮನಾಭಸ್ವಾಮಿ ದೇವಾಲಯದ ಸೆಟ್ ನಿರ್ಮಿಸಿದ್ದಾರೆ. ನೃತ್ಯನಿರ್ದೇಶಕ ಗಣೇಶ್ ಆಚಾರ್ಯ ಸಂಯೋಜನೆಯಲ್ಲಿ ಬರೋಬ್ಬರಿ ಐದು ಸಾವಿರ ಡಾನ್ಸರ್ಗಳ ಜತೆ ಈ ಸೆಟ್ನಲ್ಲಿ ಒಂದು ಹಾಡು ಮತ್ತು 10 ನಿಮಿಷದ ಬಹುಮುಖ್ಯ ಸನ್ನಿವೇಶಗಳ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
"ಆರ್ಆರ್ಆರ್' ಯಶಸ್ಸಿನ ಬಳಿಕ ರಾಜಮೌಳಿ ಮತ್ತು "ಗುಂಟೂರು ಕಾರಂ' ಚಿತ್ರದ ನಂತರ ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಘೋಷಿಸಿರುವುದು ಗೊತ್ತಿದೆ. ಈ ಚಿತ್ರಕ್ಕಾಗಿ ಹೈದರಾಬಾದ್ನಲ್ಲಿ ಬರೋಬ್ಬರಿ 50 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಕಾಶಿಯ ದೇವಸ್ಥಾನಗಳು, ಘಾಟ್ಗಳನ್ನು ಮರುಸೃಷ್ಟಿಸಲಾಗಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ದುಬಾರಿ ಸೆಟ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಯಶ್ ನಟಿಸುತ್ತಿರುವ "ಟಾಕ್ಸಿಕ್' ಚಿತ್ರಕ್ಕಾಗಿ 8.5 ಎಕರೆ ಜಾಗದಲ್ಲಿ ಲಂಡನ್ ನಗರವನ್ನು ಹೋಲುವ ಬೃಹತ್ ಸೆಟ್ ನಿರ್ಮಿಸಲಾಗಿದೆ. ಹಾಗೇ ಗಣೇಶ್ ನಟಿಸುತ್ತಿರುವ ಧನು ಮಾಸ್ಟರ್ ಆ್ಯಕ್ಷನ್-ಕಟ್ ಹೇಳುತ್ತಿರುವ ಮೈಥಲಾಜಿಕಲ್ ಹಾರರ್ "ಪಿನಾಕ' ಚಿತ್ರದ ಶೂಟಿಂಗ್ ಕೆಲ ದಿನಗಳಿಂದ ನೆಲಮಂಗದಲ್ಲಿ ನಡೆಯುತ್ತಿದ್ದು, ಅಲ್ಲಿ ಎಂಟು ಎಕರೆ ಜಾಗದಲ್ಲಿ ಸೆಟ್ ನಿರ್ಮಿಸಲಾಗಿದೆ.