ತೆಲುಗಿನ "ಉಯ್ಯಾಲ ಜಂಪಾಲ', "ಕುಮಾರಿ 21 ಎಫ್', "ಲವರ್' ಸೇರಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಖ್ಯಾತಿ ರಾಜ್ ತರುಣ್ಗೆ ಸಲ್ಲುತ್ತದೆ. ಇಂತಹ ರಾಜ್ ತರುಣ್ ವಿರುದ್ಧ ನಟಿ ಲಾವಣ್ಯ ಇದೀಗ ದೂರು ದಾಖಲಿಸಿದ್ದಾರೆ. ಕಳೆದ 10 ವರ್ಷಗಳಿಂದ ಲಿವಿನ್ನಲ್ಲಿದ್ದರೂ, ಕೆಲ ತಿಂಗಳಿನಿಂದ ಮತ್ತೊಬ್ಬ ನಟಿಗಾಗಿ ತನ್ನನ್ನು ದೂರ ಮಾಡಿ ವಂಚಿಸಿದ್ದಾರೆಂದು ರಾಜ್ ತರುಣ್ ವಿರುದ್ಧ ಆರೋಪಿಸಿದ್ದಾರೆ. ಹಾಗೇ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ರಾಜ್ ತರುಣ್, ನಂತರ ಕಣ್ಮರೆಯಾಗಿದ್ದರು. ಇದೀಗ ತಮ್ಮ ಮುಂದಿನ ಚಿತ್ರದ ನಾಯಕಿಯಾಗಿರುವ ಮುಂಬೈ ಮೂಲದ ನಟಿಯ ಜತೆ ಓಡಾಡುತ್ತಿದ್ದು, ಮೋಸ ಮಾಡುತ್ತಿದ್ದಾರೆಂದು ಲಾವಣ್ಯ ಹೈದರಾಬಾದ್ನ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಗೇ ಡ್ರಗ್ಸ್ ಪ್ರಕರಣದಲ್ಲಿ ತನ್ನನ್ನು 45 ದಿನಗಳ ಕಾಲ ಬಂಧಿಸಿದ್ದಾಗಲೂ ರಾಜ್ ತರುಣ್ ಸಹಾಯ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಆರೋಪಗಳನ್ನು ನಿರಾಕರಿಸಿರುವ ರಾಜ್ ತರುಣ್, "ಡ್ರಗ್ಸ್ ಪ್ರಕರಣ ಹೊರಬಂದ ತಕ್ಷಣ 2017ರಲ್ಲಿಯೇ ನಾನು ಆಕೆಯಿಂದ ದೂರವಾಗಿದ್ದೆ. ನಾನು ಆಕೆಯನ್ನು ಮದುವೆಯಾಗಿಲ್ಲ, ಮೋಸ ಕೂಡ ಮಾಡಿಲ್ಲ. ಸದ್ಯ ನಾನು ಮುಂಬೈ ಮೂಲದ ನಟಿಯ ಜತೆ ಡೇಟಿಂಗ್ ಮಾಡುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
ಕಳೆದ ಜನವರಿಯಲ್ಲಿ ರಿಲೀಸ್ ಆದ "ನಾ ಸಾಮಿರಂಗ' ಚಿತ್ರದಲ್ಲಿ ನಾಗಾರ್ಜುನ ತಮ್ಮನ ಪಾತ್ರದಲ್ಲಿ ನಟಿಸಿದ್ದ ರಾಜ್ ತರುಣ್, ಸದ್ಯ "ತಿರಗಬದರ ಸಾಮಿ' ಮತ್ತು "ಭಲೇ ಉನ್ನಾಡೆ' ಚಿತ್ರಗಳಲ್ಲಿ ಬಿಜಿಯಿದ್ದಾರೆ. -ಏಜೆನ್ಸೀಸ್