ಸಿನಿವಾಣಿ

ಗಲ್ವಾನ್​ ಸಂಘರ್ಷ: ಲಡಾಖ್​ ಬಿಟ್ಟು ಕಾರ್ಗಿಲ್​ನತ್ತ ಲಾಲ್​ ಸಿಂಗ್​ ಪಯಣ

ಎರಡು ವರ್ಷಗಳಾಯ್ತು ಅಮೀರ್​ ಖಾನ್​ ಚಿತ್ರವೊಂದು ಬಿಡುಗಡೆಯಾಗಿ. 2018ರ ಡಿಸೆಂಬರ್​ನಲ್ಲಿ ಬಿಡುಗಡೆಯಾದ 'ಥಗ್ಸ್​ ಆಫ್​ ಹಿಂದೂಸ್ಥಾನ್​' ಚಿತ್ರವೇ ಕೊನೆ. ಆ ನಂತರ ಅಮೀರ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ.

ಅಮೀರ್​ ಅಭಿನಯದ 'ಲಾಲ್​ ಸಿಂಗ್​ ಛಡ್ಡಾ' ಎಂಬ ಚಿತ್ರ ಸೆಟ್ಟೇರಿದ್ದು ಗೊತ್ತಿರಬಹುದು. ಹಾಲಿವುಡ್​ ಚಿತ್ರ 'ಫಾರೆಸ್ಟ್​ ಗಂಪ್​'ನಿಂದ ಸ್ಫೂರ್ತಿ ಪಡೆದ ಈ ಚಿತ್ರದ ಚಿತ್ರೀಕರಣ ಸಹ ಶುರುವಾಗಿತ್ತು. ಆದರೆ, ಲಾಕ್​ಡೌನ್​ನಿಂದ ಅರ್ಧದಲ್ಲೇ ನಿಂತಿತ್ತು. ಇಷ್ಟರಲ್ಲಿ ಚಿತ್ರೀಕರಣ ಮುಗಿಸಿ, ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆಯಾಗಿತ್ತು. ಈಗ ಲಾಕ್​ಡೌನ್​ನಿಂದ ಚಿತ್ರತಂಡದ ಯೋಚನೆ ತಲೆ ಕೆಳಗಾಗಿದೆ.

ಈ ಮಧ್ಯೆ, ಚಿತ್ರವನ್ನು ಲಡಾಖ್​ನಲ್ಲಿ ಚಿತ್ರೀಕರಿಸಬೇಕು ಎಂಬುದು ಅಮೀರ್​ ಖಾನ್​ ಆಸೆಯಾಗಿತ್ತು. ಲಾಕ್​ಡೌನ್​ ಮುಗಿದ ಮೇಲೆ ಲಡಾಖ್​ನಲ್ಲಿ ಒಂದಿಷ್ಟು ಭಾಗದ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಈ ಮುನ್ನ ಸಿದ್ಧತೆ ನಡೆಸಿತ್ತು. ಈ ನಡುವೆ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾಗಿದ್ದರಿಂದ, ಲಡಾಖ್​ ಬಿಟ್ಟು ಕಾರ್ಗಿಲ್​ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ.

ಈಗಾಗಲೇ ಚಿತ್ರತಂಡದವರು ದೆಹಲಿ, ರಾಜಸ್ತಾನ, ಚಂಡೀಗಢ, ಅಮೃತಸರ, ಕೊಲ್ಕತ್ತಾ ಮುಂತಾದ ಕಡೆ ಚಿತ್ರೀಕರಣ ಮಾಡಿತ್ತು. ಲಡಾಖ್​ನಲ್ಲಿ ಚಿತ್ರೀಕರಣ ಮಾಡಿಸುವುದಕ್ಕೆ ಯೋಚಿಸಿತ್ತು. ಈಗ ಬಹುಶಃ ಮುಂದಿನ ಹಂತದ ಚಿತ್ರೀಕರಣ ಕಾರ್ಗಿಲ್​ನಲ್ಲಿ ಆಗುವ ಸಾಧ್ಯತೆ ಇದೆ. ಹಾಗಂತ ಈಗಲೇ ಶುರುವಾಗುವುದಿಲ್ಲ. ಅಕ್ಟೋಬರ್​ವರೆಗೂ ಚಿತ್ರೀಕರಣದಲ್ಲಿ ಭಾಗವಹಿಸದಿರಲು ಅಮೀತ್​ ಖಾನ್​ ನಿರ್ಧರಿಸಿದ್ದಾರೆ.

ಅಷ್ಟರಲ್ಲಿ ಕರೊನಾ ತಹಬದಿಗೆ ಬಂದರೆ, ಚಿತ್ರೀಕರಣ ಮುಂದುವರೆಯಲಿದೆ. ಇಲ್ಲವಾದರೆ, ಇನ್ನೂ ಪೋಸ್ಟ್​ಪೋನ್​ ಆದರೆ, ಆಶ್ಚರ್ಯವಿಲ್ಲ.

'ಲಾಲ್​ ಸಿಂಗ್​ ಛಡ್ಡಾ' ಚಿತ್ರದಲ್ಲಿ ಅಮೀರ್​ ಖಾನ್ ಜತೆಗೆ ಕರೀನಾ ಕಪೂರ್​, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದು, ಅದ್ವೈತ್​ ಚಂದನ್​ ನಿರ್ದೇಶನ ಮಾಡುತ್ತಿದ್ದಾರೆ.