ನವದೆಹಲಿ: ಲಾಕ್ ಡೌನ್ ಆಗಿ ಮನೆಯಲ್ಲಿ ಕುಳಿತಿರುವವರಿಗೆ ಒಂದು ಸಿಹಿ ಸುದ್ದಿ. ಮನೆಯಲ್ಲಿ ಕುಳಿತು ಏನು ಮಾಡುವುದೆಂಬ ಚಿಂತೆಯೇ? 80ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನೊಮ್ಮೆ ನೋಡಿ ಬಿಡೋಣ ಎಂಬ ಆಸೆ ಏನಾದರೂ ಮನದಲ್ಲಿದೆಯೇ? ಹಾಗಂತ ಬಹಳ ಜನ ಟ್ವಟರ್ನಲ್ಲಿ ದೂರದರ್ಶನಕ್ಕೆ ಕೋರಿಕೆ ಸಲ್ಲಿಸಿದ್ದರು. ಎಲ್ಲರ ಅಪೇಕ್ಷೆ ಮೇರೆಗೆ ನಾಳೆಯಿಂದಲೇ ರಾಮಾಯಣ ಧಾರಾವಾಹಿ ದಿನಕ್ಕೆ ಎರಡು ಹೊತ್ತು ಪ್ರಸಾರವಾಗಲಿದೆ.
ಹೌದು, ಪ್ರಸಾರ ಭಾರತಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ, ಕೇಂದ್ರ ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ರಾಮಾಯಣ ಧಾರಾವಾಹಿ ಮರುಪ್ರಸಾರದ ವಿಚಾರವನ್ನು ಪ್ರಕಟಿಸಿದರು. ಇದರ ಬೆನ್ನಲ್ಲೇ, ಡಿಡಿ ನ್ಯೂಸ್ ಇದನ್ನು ಟ್ವೀಟ್ ಮಾಡಿದ್ದು, ಡಿಡಿ ನ್ಯಾಷನಲ್ ಚಾನೆಲ್ನಲ್ಲಿ ಮಾರ್ಚ್ 28ರಿಂದ ಪ್ರತಿನಿತ್ಯ ಬೆಳಗ್ಗೆ 9ರಿಂದ 10 ಮತ್ತು ರಾತ್ರಿ 9 ರಿಂದ 10 ರ ಅವಧಿಯಲ್ಲಿ ತಲಾ ಒಂದೊಂದು ಎಪಿಸೋಡನ್ನು ಪ್ರಸಾರವಾಗಲಿದೆ ಎಂದು ಪ್ರಕಟಿಸಿದೆ.
ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿ ಈಗ ಮಧ್ಯವಯಸ್ಸಿನಲ್ಲಿ ಇರುವವರಿಗೆ ಮತ್ತು ಹಿರಿಯರಿಗೆ ಸರೀ ನೆನಪಿನಲ್ಲಿ ಇರಬಹುದು. ಅರುಣ್ ಗೋವಿಲ್ ರಾಮನ ಪಾತ್ರದಲ್ಲಿ, ದೀಪಿಕಾ ಚಿಖಾಲಿಯಾ ಸೀತಾ ಆಗಿ, ಅರವಿಂದ ತ್ರಿವೇದಿ ಅವರು ರಾವಣನಾಗಿ ಧಾರಾ ಸಿಂಗ್ ಹನುಮಂತನ ಪಾತ್ರದಲ್ಲಿ ಗಮನಸೆಳೆದ್ದಿದ್ದರು. ಈ ಸರಣಿ ಅಂದು 1987ರ ಜನವರಿ 25ರಿಂಧ 1988ರ ಜುಲೈ 31ರ ತನಕ ಪ್ರಸಾರವಾಗಿತ್ತು. ಇದೇ ಅವಧಿಯಲ್ಲಿ ಪ್ರಸಾರವಾಗಿದ್ದ ಇನ್ನೊಂದು ಪೌರಾಣಿಕ ಧಾರಾವಾಹಿ ಬಿ.ಆರ್. ಛೋಪ್ರಾ ಅವರ ಮಹಾಭಾರತ.
ಈ ಎರಡು ಧಾರಾವಾಹಿಗಳು ಪ್ರಸಾರವಾಗುತ್ತಿದ್ದ ಸಮಯದಲ್ಲಿ ಒಬ್ಬನೂ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಎಲ್ಲರೂ ಟಿವಿ ಎದುರೇ ಕುಳಿತಿರುತ್ತಿದ್ದರು. ಹೊರಗೆ ರಸ್ತೆ ನಿರ್ಜನವಾಗಿರುತ್ತಿತ್ತು. ಒಂದು ರೀತಿಯ ಕರ್ಫ್ಯೂ ಚಾಲ್ತಿಯಲ್ಲಿದ್ದಂತೆ ಇರುತ್ತಿತ್ತು ಆ ದಿನಗಳ ಆ ಹೊತ್ತು! ಇಂದು ಧಾರಾವಾಹಿ ನೋಡುವುದಕ್ಕಾಗಿ ರಸ್ತೆ ನಿರ್ಜನವಾಗಿಲ್ಲ. ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮತ್ತೆ ಈ ಧಾರಾವಾಹಿಯ ಮರುಪ್ರಸಾರಕ್ಕೆ ವೇದಿಕೆ ಸಿದ್ಧವಾಗಿದೆ!