| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ನೀತಿ
ನಿರ್ದೇಶಕ: ರಾಜಗೋಪಾಲ್
ತಾರಾಗಣ: ಖುಷಿ ರವಿ, ಸಂಪತ್ ಮೈತ್ರೇಯ, ಪ್ರವಿಣ್ ಅಥರ್ವ, ಸುಜಿತ್, ಶ್ರೀನಾಥ್ ಕೆ.ಎಸ್
ಶ್ರೀಮಂತ ಮನೆತನದ ನೀತಿ (ಖುಷಿ) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಪ್ರತಾಪ್ಗೆ (ಸಂಪತ್) ತೀವ್ರ ಹಣದ ಅನಿವಾರ್ಯವಿರುತ್ತದೆ. ಹೀಗಾಗಿ ಮೊದಲ ಬಾರಿಗೆ ಕಳ್ಳತನಕ್ಕಿಳಿಯುತ್ತಾನೆ. ಆದರೆ, ಆತ ಕನ್ನ ಹಾಕಲು ಆಯ್ಕೆ ಮಾಡಿಕೊಳ್ಳುವುದು ಇದೇ ನೀತಿ ಮನೆಯನ್ನು. ಬದುಕು ಚೆಲ್ಲಲು ಹೊರಟ ಖುಷಿ ಮತ್ತು ಬದುಕಲು ಹವಣಿಸುತ್ತಿರುವ ಪ್ರತಾಪ್ ಮುಖಾಮುಖಿಯಾಗುತ್ತಾರೆ. ಅಲ್ಲಿಂದ ಅವರ ಹಿನ್ನೆಲೆ ತೆರೆದುಕೊಳ್ಳುತ್ತದೆ. ಖುಷಿ ಆತ್ಮಹತ್ಯೆಗೆ ನಿರ್ಧರಿಸಲು ಕಾರಣವೇನು? ಪ್ರತಾಪ್ಗೆ ಅಷ್ಟೊಂದು ಹಣದ ಅವಶ್ಯಕತೆ ಏಕೆ? ಖುಷಿ ಸಾಯುತ್ತಾಳಾ? ಪ್ರತಾಪ್ ಬದುಕುತ್ತಾನಾ? ಅಥವಾ ಇಬ್ಬರ ನಿರ್ಧಾರಗಳ ಹಿಂದೆ ಬೇರೆಯದೇ ವಿಷಯಗಳಿರುತ್ತವಾ? ಹೀಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ, "ನೀತಿ' ಸಿನಿಮಾ ನೋಡಿ.
ನಿರ್ದೇಶಕ ರಾಜಗೋಪಾಲ್ "ನೀತಿ' ಮೂಲಕ ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಕಥೆಯನ್ನು ಜನರ ಮುಂದಿಟ್ಟಿದ್ದಾರೆ. ಬಹುತೇಕ ಕಥೆ ಒಂದೇ ಮನೆಯಲ್ಲಿ, ನೀತಿ ಮತ್ತು ಪ್ರತಾಪ್ ಸುತ್ತ ಸಾಗುತ್ತದೆ. ಹಿನ್ನೆಲೆ ತೆರೆದುಕೊಂಡಾಗ ಮಾತ್ರ ಉಳಿದ ಮೂರು ಪಾತ್ರಗಳು ಬರುತ್ತವಷ್ಟೇ. ಹೀಗೆ ಕೆಲವೇ ಪಾತ್ರಗಳನ್ನಿಟ್ಟುಕೊಂಡು, ಗಟ್ಟಿ ಚಿತ್ರಕಥೆ ಕಟ್ಟಿಕೊಂಡು 105 ನಿಮಿಷಗಳ ಒಂದು ಥ್ರಿಲ್ಲಿಂಗ್ ಅನುಭವ ನೀಡುತ್ತಾರೆ ನಿರ್ದೇಶಕರು. ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ಗಳಲ್ಲಿ ಮುಂದೆ ಹೀಗೆ ಆಗುತ್ತದೆ ಅಂತ ಊಹಿಸಬಹುದು. ಆದರೆ, ಅದನ್ನೂ ಮೀರಿದ ಟರ್ನ್ಗಳು, ಭಾವನಾತ್ಮಕ ಅಂಶಗಳಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿರುವ ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ. ಇನ್ನು ಖುಷಿ ರವಿ ಮತ್ತು ಸಂಪತ್ ಮೈತ್ರೇಯ ನಟನೆಯ ಮೂಲಕವೇ ಪ್ರೇಕ್ಷಕರನ್ನು ಕಥೆಯೊಳಗೆ ಸೆಳೆದುಕೊಳ್ಳುತ್ತಾರೆ. ಇನ್ನೇನು ಕಥೆ ನಿಧಾನವಾಯಿತು ಎನ್ನುತ್ತಿರುವಾಗಲೇ ಬರುವ ಟ್ವಿಸ್ಟ್ಗಳು ಪ್ರೇಕ್ಷಕರನ್ನು ಮತ್ತೆ ಬಡಿದೆಬ್ಬಿಸುತ್ತವೆ. ಆ ನಿಟ್ಟಿನಲ್ಲಿ "ನೀತಿ' ಒಂದೊಳ್ಳೆ ಪ್ರಯತ್ನ. ಹೀಗಾಗಿ ಒಮ್ಮೆ ನೋಡಲಡ್ಡಿಯಿಲ್ಲ.