ಸಿನಿವಾಣಿ

ಓಣಂಗೆ ಮೋಹನ್​ ಲಾಲ್​ ಬದಲು ಪೃಥ್ವಿರಾಜ್​ ಚಿತ್ರ ...

chetannadiger

ತಿರುವನಂತಪುರಂ: ಮೋಹನ್​ ಲಾಲ್​ ಅಭಿನಯದ 'ಮರಕ್ಕರ್​ - ಅರಬ್ಬಿಕಡಲಿಂಟೆ ಸಿಂಹಂ' ಚಿತ್ರದ ಬಿಡುಗಡೆ ಮೂರನೇ ಬಾರಿಗೆ ಮುಂದಕ್ಕೆ ಹೋಗಿದೆ. ಚಿತ್ರವು ಆಗಸ್ಟ್​ 12ರಂದು ಓಣಂ ಪ್ರಯುಕ್ತ ಬಿಡುಗಡೆಯಾಗಬೇಕಿತ್ತು. ಆದರೆ, ಕೇರಳದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಿರುವ ಕಾರಣ ಮತ್ತು ಲಾಕ್​​ಡೌನ್​ ವಿಸ್ತರಣೆಯಾಗುವ ಕಾರಣ, ಚಿತ್ರತಂಡದವರು ಚಿತ್ರವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

'ಮರಕ್ಕರ್​' ಚಿತ್ರವು ಕಳೆದ ವರ್ಷ ಮಾರ್ಚ್​ 20ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ ಘೋಷಣೆಯಾಯಿತು. ಆ ನಂತರ ಈ ವರ್ಷದ ಮಾರ್ಚ್​​ಗೆ ಮುಂದೂಡಲಾಯಿತು. ಎರಡನೇ ಲಾಕ್​ಡೌನ್​ನಿಂದ ಅದೂ ಸಾಧ್ಯವಾಗಲಿಲ್ಲ. ಕೊನೆಗೆ, ಚಿತ್ರದ ಬಿಡುಗಡೆಯನ್ನು ಆಗಸ್ಟ್​ 12ಕ್ಕೆ ಮುಂದೂಡಲಾಗಿತ್ತು. ಈಗಾಗಲೇ ಚಿತ್ರವು ಸಾಕಷ್ಟು ತಡವಾಗಿರುವುದರಿಂದ, ಕೇರಳದ ಎಲ್ಲ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದ್ದು, ಮೂರು ವಾರಗಳ ಕಾಲ ಬೇರೆ ಯಾವ ಚಿತ್ರಗಳನ್ನೂ ಬಿಡುಗಡೆ ಮಾಡುವಂತಿಲ್ಲ ಎಂದು ಕೇರಳ ನಿರ್ಮಾಪಕರ ಮತ್ತು ಪ್ರದರ್ಶಕರ ಸಂಘಗಳ ನಡುವೆ ಮೌಕಿಕ ಒಪ್ಪಂದ ಸಹ ಆಗಿತ್ತು. ಆದರೆ, ಈಗ ಚಿತ್ರಪ್ರದರ್ಶನವೇ ರದ್ದಾಗಿರುವುದರಿಂದ ಬಿಡುಗಡೆ ಮುಂದಕ್ಕೆ ಹೋಗಿದೆ.

ಹಾಗಂತ ಮೋಹನ್​ ಲಾಲ್​ ಮತ್ತು ಮಲಯಾಳಂ ಚಿತ್ರಗಳ ಅಭಿಮಾನಿಗಳು ಬೇಸರಪಡುವ ಅಗತ್ಯವಿಲ್ಲ. ಓಣಂ ಸಂದರ್ಭದಲ್ಲಿ ಈ ಬಾರಿ ಯಾವುದೇ ದೊಡ್ಡ ಬಿಡುಗಡೆ ಇಲ್ಲ ಎನ್ನುವ ಹಾಗಿಲ್ಲ. 'ಮರಕ್ಕರ್​' ಬದಲು ಪೃಥ್ವಿರಾಜ್​ ಅಭಿನಯದ 'ಕುರುತ್ತಿ' ಚಿತ್ರ ಬಿಡುಗಡೆಯಾಗುತ್ತಿದೆ. ಕಳೆದ ತಿಂಗಳು ಪೃಥ್ವಿರಾಜ್​ ಅಭಿನಯದ 'ಕೋಲ್ಡ್​ ಕೇಸ್​', ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಸಹ ಅಮೇಜಾನ್​ ಪ್ರೈಮ್​ನಲ್ಲೇ ಆಗಸ್ಟ್​​ 11ರಂದು ಬಿಡುಗಡೆಯಾಗುತ್ತಿದೆ.

ಮನು ವಾರಿಯರ್​ ನಿರ್ದೇಶನದ ಈ ಚಿತ್ರವು ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡಗುಡೆಯಾಗಬೇಕಿತ್ತು. ಆದರೆ, ಅದು ಸಾಧ್ಯವಾಗದೆ, ಈಗ ನೇರವಾಗಿ ಒಟಿಟಿಗೆ ಬಂದಿದೆ. ಚಿತ್ರದಲ್ಲಿ ರೋಶನ್​ ಮ್ಯಾಥ್ಯೂ, ಮುರಳಿ ಗೋಪಿ, ಮಮ್ಮುಕೋಯಾ, ಮಣಿಕಂಠ ರಾಜನ್​, ಸಾಗರ್​ ಸೂರ್ಯ ಮುಂತಾದವರು ನಟಿಸಿದ್ದಾರೆ.