ಸಿನಿವಾಣಿ

Love You Muddu Review ; ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?

ಚಿತ್ರ: ಲವ್​ ಯು ಮುದ್ದು

ನಿರ್ದೇಶನ: ಕುಮಾರ್​

ತಾರಾಗಣ: ಸಿದ್ದು ಮೂಲಿಮನಿ, ರೇಷ್ಮಾ, ತಬಲ ನಾಣಿ, ರಾಜೇಶ್​ ನಟರಂಗ, ಶ್ರೀವತ್ಸ, ಸ್ವಾತಿ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಪ್ರೀತಿಗೋಸ್ಕರ ನೀವೇನು ಮಾಡಬಲ್ಲಿರಿ? ಏನು ಬೇಕಾದರೂ ಮಾಡುವೆ. ಕೊಲ್ಲೋಕೂ ರೆಡಿ, ಸಾಯೋಕೂ ಸಿದ್ಧ ಎನ್ನುವ ಹಲವು ಪ್ರೇಮಕಥೆಗಳನ್ನು ನೋಡಿದ್ದೇವೆ. ಇದೀಗ ಜೆನ್​&ಜೀ ಯುಗದಲ್ಲಿ ತಡವಾಗಿ ಬಂದದ್ದಕ್ಕೆ ಬ್ರೇಕಪ್​, ಬೈದದ್ದಕ್ಕೆ ವಿಚ್ಛೇದನಗಳ ಟೈಮ್​ಪಾಸ್​ ಲವ್​ಸ್ಟೋರಿಗಳನ್ನೂ ನೋಡುತ್ತಿದ್ದೇವೆ. ಆದರೆ, ಇದೆಲ್ಲವನ್ನೂ ಮೀರಿದ ಕೆಲ ಪ್ರೇಮಕಥೆಗಳಿವೆ. ಅಲ್ಲಿ ಪ್ರೀತಿಯೂ ಗೆದ್ದಿದೆ, ಪ್ರೇಮಿಗಳೂ ಗೆದ್ದಿದ್ದಾರೆ. ಅಂತಹ ಅಪರೂಪದ ಲವ್​ಸ್ಟೋರಿ "ಲವ್​ ಯು ಮುದ್ದು'.

ಅಮ್ಮನನ್ನು ನೋಡಿಕೊಂಡು ಬರುವೆ ಎಂದು ಕರ್ಣ (ಸಿದ್ದು), ಅಪ್ಪನಿಗೆ (ರಾಜೇಶ್​) ಹೇಳಿ ಕಾರ್ಕಳಕ್ಕೆ ಹೊರಡುತ್ತಾನೆ. ಅಲ್ಲಿರುವ ಅನ್ನಪೂರ್ಣೇಶ್ವರಿ ಪಬ್ಲಿಕ್​ ಶಾಲೆಯ ಟೀಚರ್​ ಸುಮತಿ (ರೇಷ್ಮಾ) ಮೇಲೆ ಆತನಿಗೆ ಲವ್​ ಅಟ್​ ಸ್ಟ್​ ಸೈಟ್​. ಆದರೆ, ಸುಮತಿಯೋ ಅದೇ ಭೇಟಿಯಲ್ಲೇ ಕರ್ಣನ ಕಪಾಳಕ್ಕೆ ಬಾರಿಸುತ್ತಾಳೆ. ಹೀಗೆ ಮುಖಾಮುಖಿಯಾದ ಮೊದಲ ಬಾರಿಯೇ ಪರಸ್ಪರ ತದ್ವಿರುದ್ಧದ ಭಾವನೆಗಳನ್ನು ಹೊಂದಿದ್ದರೂ, ಇಬ್ಬರ ನಡುವೆ ಪರಿಚಯ, ಗೆಳೆತನ ಕ್ರಮೇಣ ಪ್ರೀತಿ ಚಿಗುರೊಡೆಯುತ್ತದೆ. ಅಪ್ಪನಿಗೆ ವಿಷಯ ತಿಳಿಸಬೇಕು ಅಂತ ಸುಮತಿ ಜತೆ ಕರ್ಣ ಬೆಂಗಳೂರಿಗೆ ಹೋಗುತ್ತಾನೆ. ಆದರೆ, ಇಲ್ಲಿ ನೋಡಿದರೆ ಆತನ ಅಪ್ಪ, ಕರ್ಣನಿಗೇ ವಿಷಯ ತಿಳಿಸದೇ ಹುಡುಗಿಯೊಬ್ಬಳ ಜತೆ ನಿಶ್ಚಿತಾರ್ಥ ಫಿಕ್ಸ್​ ಮಾಡಿರುತ್ತಾನೆ. ಅದೇ ಸಮಯದಲ್ಲಿ ಸುಮತಿಗೆ ಅಪಘಾತವಾಗುತ್ತದೆ. ಹಾಗಾದರೆ ಈ ಗುಡ್​ಬಾಯ್​ ಕರ್ಣ ಸುಮತಿಗೆ ಗುಡ್​ಬೈ ಹೇಳಿಬಿಡುತ್ತಾನಾ? ಅಪ್ಪ ಹೇಳಿದ ಹುಡುಗಿ ಜತೆ ಮದುವೆಯಾಗುತ್ತಾನಾ? ಅಥವಾ ಪ್ರೀತಿ ಮತ್ತು ಪ್ರೀತಿಸಿದವಳೇ ಮುಖ್ಯ ಅಂತ ಸುಮತಿ ಜತೆ ನಿಲ್ಲುತ್ತಾನಾ? ಮುಂದೇನು? "ಲವ್​ ಯು ಮುದ್ದು' ನೋಡಿ.

ಒಂದೆಡೆ ಕರ್ಣ ಮತ್ತು ಸುಮತಿಯ ಲವ್​ ಕಮ್​ ನೋವಿನ ಸ್ಟೋರಿ ಕಡಲ ಕಂಬನಿಯಲ್ಲಿ ಮಿಂದೇಳುವಂತೆ ಮಾಡಿದರೆ, ಮತ್ತೊಂದೆಡೆ ಗೇಟ್​ ಕೀಪರ್​ ಪಾರಿವಾಳ ಅಲಿಯಾಸ್​ ಪ್ರೇಮ್​ (ತಬಲ ನಾಣಿ) ಮತ್ತು ಆತನ ಶಾಲೆಯ ಪ್ರಿನ್ಸಿಪಲ್​ ನಡುವಿನ ಪ್ರೀತಿ, ರೀಲ್​ ಸ್ಟಾರ್​ ಡಿಂಗ್​ ಡಾಂಗ್​ ದಿನೇಶನ (ಶ್ರೀವತ್ಸ) ಆನ್​ಲೈನ್​ ಪ್ರೇಮಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. "ಕೆಮಿಸ್ಟ್ರಿ ಆ್​ ಕರಿಯಪ್ಪ', "ಕ್ರಿಟಿಕಲ್​ ಕೀರ್ತನೆಗಳು' ನಿರ್ದೇಶಕ ಕುಮಾರ್​ ಮೊದಲ ಬಾರಿಗೆ ತಮ್ಮ ಕಂರ್ಟ್​ ಜೋನ್​ನಿಂದ ಹೊರಬಂದು, ನೈಜ ಟನೆಯಾಧಾರಿತ ರೊಮ್ಯಾಂಟಿಕ್​ ಡ್ರಾಮಾ ಹೆಣೆದಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳು ಅತ್ತೂ, ಕರೆದೂ ಪ್ರೇಕ್ಷಕರನ್ನು ಅಳಿಸುತ್ತವೆ. ಆದರೆ, ಈ ಚಿತ್ರದಲ್ಲಿ ಸಿದ್ದು ಮೂಲಿಮನಿ ಆ ಕೆಲಸ ಮಾಡಿದ್ದಾರೆ. ಕರ್ಣ ಪಾತ್ರವನ್ನು ಉಸಿರಾಡಿ, ಜೀವಿಸಿದ್ದಾರೆ. ರೇಷ್ಮಾ ಕೂಡ ಗಮನ ಸೆಳೆಯುತ್ತಾರೆ. "ಪ್ರೀತಿ ಪ್ರಪಂಚದ ಅತ್ಯಂತ ದುಬಾರಿ ಮೆಡಿಸಿನ್​. ಕೆಲವರಿಗೆ ಅದರ ಬೆಲೆ ಗೊತ್ತಿಲ್ಲ', "ಹಳೆಯ ನೆನಪಿನಲ್ಲಿ ಹಾಳಾಗೋದಕ್ಕಿಂತ, ಹೊಸ ಕನಸಿನಲ್ಲಿ ಬದುಕೋಣ' ಎಂಬ ಹಲವು ಡೈಲಾಗ್​ಗಳು ಇಷ್ಟವಾಗುತ್ತವೆ. ಮೊದರ್ಲಧ ಸರಳವಾಗಿ ನಗುತ್ತಾ, ನಗಿಸುತ್ತಾ ಸಾಗುತ್ತದೆಯಾದರೂ, ದ್ವೀತಿಯಾರ್ಧ ಹೃದಯ ಹಿಂಡುವ ಚಿತ್ರವಿದು.