ಸಿನಿವಾಣಿ

ಈ ಖಾತೆಯಲ್ಲಿ ಮಲೆನಾಡ ಸೊಗಡಿದೆ..: ವಿಜಯವಾಣಿ ಸಿನಿಮಾ ವಿಮರ್ಶೆ

  • ಚಿತ್ರ: ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ
  • ನಿರ್ದೇಶನ: ವಿನಾಯಕ ಕೋಡ್ಸರ
  • ನಿರ್ಮಾಣ: ಎ. ಮಂಜು
  • ತಾರಾಗಣ: ದಿಗಂತ್, ಐಂದ್ರಿತಾ ರೇ, ರಂಜನಿ ರಾಘವನ್, ವಿದ್ಯಾ ಮೂರ್ತಿ, ಪ್ರಕಾಶ್ ತುಮ್ಮಿನಾಡು ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

‘ಅಷ್ಟು ದೂರದ ಊರಿಂದ ಕೇವಲ 2,300 ರೂ.ಗೆ ಇಲ್ಲಿಯವರೆಗೂ ಬರ್ತಾನೆ ಅಂದ್ರೆ ಏನೋ ಇದೆ ಅಂತ ಅರ್ಥ ...’

ಲಾಯರ್ ಹೇಳಿದ ಮಾತಲ್ಲಿ ನಿಜ ಇದೆ ಎಂದು ಪ್ರೇಕ್ಷಕರಿಗೂ ಅನಿಸುವುದು ಹೌದು. ಇಲ್ಲವಾದರೆ, ಶಂಕರ ಅಷ್ಟು ಸಣ್ಣ ಮೊತ್ತಕ್ಕಾಗಿ ತನ್ನೂರಿಂದ ಬೆಂಗಳೂರಿಗೆ ಯಾಕೆ ಬರಬೇಕು? ಬ್ಯಾಂಕ್​ವೊಂದರ ಮೇಲೆ ಯಾಕೆ ಕೇಸ್ ಹಾಕಬೇಕು? ಆದರೂ ಹಾಗೆ ಮಾಡುತ್ತಾನೆ ಎಂದರೆ, ಅದರಲ್ಲಿ ಏನೋ ಬಲವಾದ ಕಾರಣವಿರಬೇಕು ಮತ್ತು ಆ ಕಾರಣ ಗೊತ್ತಾಗಬೇಕಾದರೆ ಚಿತ್ರ ನೋಡಬೇಕು.

‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಹೆಸರೇ ಇದೊಂದು ಮಾಮೂಲಿ ಪ್ರೇಮಕಥೆಯಲ್ಲ, ಬೇರೆ ತರಹದ ಸಿನಿಮಾ ಎಂದು ಹೇಳುತ್ತದೆ. ಇಲ್ಲಿ ಮಲೆನಾಡಿನ ರೈತರ ಜನಜೀವನ, ಅವರ ಸಮಸ್ಯೆಗಳು, ಬ್ಯಾಂಕ್​ಗಳ ದಬ್ಬಾಳಿಕೆ ಮುಂತಾದ ಹಲವು ವಿಷಯಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ. ಮೊದಲಾರ್ಧವೆಲ್ಲ ಮಲೆನಾಡ ಪರಿಸರ, ಸೊಗಡು, ಜನ, ಅವರ ಮುಗ್ಧತೆಯ ಸುತ್ತ ಸುತ್ತುತ್ತದೆ. ಚಿತ್ರ ಗಂಭೀರವಾಗುವುದು ದ್ವಿತೀಯಾರ್ಧದಲ್ಲಿ. ಅದರಲ್ಲೂ ಶಂಕರ ವರ್ಸಸ್ ಗೋವಿಂದ ಬ್ಯಾಂಕ್​ನ ಕೇಸ್, ಕೋರ್ಟ್ ಮೆಟ್ಟಿಲೇರಿದ ಮೇಲೆ ಚಿತ್ರ ಇನ್ನೊಂದು ಹಂತಕ್ಕೆ ಹೋಗುತ್ತದೆ.

ಮಲೆನಾಡಿನ ಸೊಗಡು, ಪರಿಸರ ಮತ್ತು ಭಾಷೆಯನ್ನು ಅಷ್ಟೊಂದು ಚೆನ್ನಾಗಿ ಸೆರೆಹಿಡಿದ ಚಿತ್ರಗಳು ಕಡಿಮೆಯೇ. ನಿರ್ದೇಶಕ ವಿನಾಯಕ ಮೂಲತಃ ಮಲೆನಾಡಿನವರಾದ್ದರಿಂದ ಅದು ಸಾಧ್ಯವಾಗಿದೆ. ಅಲ್ಲಿನ ಜೀವನಶೈಲಿಯನ್ನು ಬಹಳ ಚೆನ್ನಾಗಿ ಅವರು ತೆರೆಯ ಮೇಲೆ ತಂದಿದ್ದಾರೆ. ಹಾಗಂತ ಚಿತ್ರದಲ್ಲಿ ನ್ಯೂನತೆಗಳೇ ಇಲ್ಲ ಎಂದೇನಲ್ಲ. ಖಂಡಿತಾ ಇವೆ. ಆದರೆ, ಚಿತ್ರದ ಪರಿಸರ, ಅಲ್ಲಿನ ಉದ್ದೇಶ ಮತ್ತು ಕಾಳಜಿಗಳ ಎದುರು ಗೌಣವಾಗುತ್ತವೆ.

ಚಿತ್ರದಲ್ಲಿನ ಖುಷಿಯಾಗುವ ಇನ್ನೊಂದು ವಿಷಯವೆಂದರೆ, ಅದು ಅಭಿನಯ. ದಿಗಂತ್ ಈ ಪಾತ್ರವನ್ನು ಜೀವಿಸಿದ್ದಾರೆ. ಅವರು ಸಹ ಮಲೆನಾಡಿನವರಾದ್ದರಿಂದ ಮಾತು, ಶೈಲಿ ಎಲ್ಲವೂ ಸಲೀಸು. ವಿದ್ಯಾ ಮೂರ್ತಿ, ರಂಜನಿ ರಾಘವನ್, ಪ್ರಕಾಶ್ ತುಮ್ಮಿನಾಡು ಅಭಿನಯ ಖುಷಿಕೊಡುತ್ತದೆ. ಐಂದ್ರಿತಾ ರೇ ಬಹಳ ಕಷ್ಟಪಟ್ಟು ನಟಿಸಿರುವುದು ಪ್ರತೀ ದೃಶ್ಯದಲ್ಲೂ ಕಾಣುತ್ತದೆ. ಪ್ರಜ್ವಲ್ ಪೈ ಸಂಗೀತ, ನಂದಕಿಶೋರ್ ಛಾಯಾಗ್ರಹಣ, ಕಿವಿಗೂ ಕಣ್ಣಿಗೂ ಹಿತವೆನಿಸುತ್ತದೆ.