ಮುಂಬೈ: ಇನ್ನು ಮುಂದೆ ಸಲ್ಮಾನ್ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ಇದೀಗ ಉಲ್ಟಾ ಹೊಡೆದಿದ್ದಾರೆ. ಸಲ್ಮಾನ್ ಖಾನ್ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಧೇ ಚಿತ್ರದ ವಿಮರ್ಶೆ ಮಾಡುವುದರ ಜತೆಗೆ, ಅದು ಸಲ್ಮಾನ್ ಅವರ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಚಿತ್ರ ಎಂದು ಕೆಆರ್ಕೆ ಇತ್ತೀಚೆಗಷ್ಟೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸಲ್ಮಾನ್, ಕೆಆರ್ಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ಹೂಡಿದ್ದರು. ಇದರಿಂದ ವಿಚಲಿತರಾಗಿದ್ದ ಕೆಆರ್ಕೆ, ರಾಧೇ ಚಿತ್ರದ ವಿಮರ್ಶೆಯನ್ನು ಆನ್ಲೈನ್ನಿಂದ ಡಿಲೀಟ್ ಮಾಡುವುದರ ಜತೆಗೆ, ಇನ್ನು ಮುಂದೆ ಸಲ್ಮಾನ್ ಚಿತ್ರಗಳ ವಿಮರ್ಶೆಯನ್ನೇ ಮಾಡುವುದಿಲ್ಲ ಎಂದು ಹೇಳಿದ್ದರು. ಇದೀಗ ಅವರು ಉಲ್ಟಾ ಹೊಡೆದಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಾಮಾನ್ಯವಾಗಿ ಯಾರಾದರೂ ನಿರ್ಮಾಪಕರು ಅಥವಾ ನಿರ್ದೇಶಕರು ತಮ್ಮ ಚಿತ್ರಗಳ ವಿಮರ್ಶೆ ಮಾಡಬೇಡಿ ಎಂದರೆ, ನಾನು ವಿಮರ್ಶೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ, ಸಲ್ಮಾನ್ ಖಾನ್ ಮಾತ್ರ ನನ್ನ ಕಾಲು ಹಿಡಿದುಕೊಂಡರೂ, ನಾನು ಅವರ ಚಿತ್ರಗಳನ್ನು ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ. ವಿಮರ್ಶೆ ಮಾಡುವುದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ಗೆ ತಮ್ಮನ್ನು ಕಂಡರೆ ಭಯ ಎನ್ನುವ ಕೆಆರ್ಕೆ, ಚಿತ್ರವನ್ನು ನೋಡಿರುವ ಎಲ್ಲರೂ ಚಿತ್ರ ಚೆನ್ನಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಅವರ್ಯಾರ ವಿಮರ್ಶೆಗಳ ಬಗ್ಗೆಯೂ ಸಲ್ಮಾನ್ಗೆ ಬೇಸರವಿಲ್ಲ, ನನ್ನ ವಿಮರ್ಶೆಯೊಂದನ್ನು ಬಿಟ್ಟು. ನಾನೆಂತಹ ವಿಮರ್ಶಕ ಎಂಬುದನ್ನು ಇದು ತೋರಿಸುತ್ತದೆ ಮತ್ತು ಬಾಲಿವುಡ್ನ ಇತಿಹಾಸದಲ್ಲೇ ನಾನು ನಂಬರ್ ಒನ್ ವಿಮರ್ಶಕ ಎಂಬ ವಿಷಯವನ್ನು ಯಾರೂ ಅಲ್ಲಗೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಮಿಕ್ಕೆಲ್ಲರೂ ಅಷ್ಟಕ್ಕಷ್ಟೇ ಎಂದು ಕೆಆರ್ಕೆ ಹೇಳಿದ್ದಾರೆ.
ಇದನ್ನೂ ಓದಿ: ನಟಿ ಕಾಜಲ್ ಅಗರ್ವಾಲ್ ಸಂಭಾವನೆಯಲ್ಲಿ ಕಟ್!
ರಾಧೇ ಚಿತ್ರವು ಬಹಳ ಸಾಧಾರಣವಾಗಿದೆ ಎಂದು ಸಲ್ಮಾನ್ ತಂದೆ ಸಲೀಮ್ ಖಾನ್ ಹೇಳಿರುವುದನ್ನು ಉದಾಹಿರಿಸಿರುವ ಕೆಆರ್ಕೆ, ಅವರ ತಂದೆಯೇ ಅದೊಂದು ಕೆಟ್ಟ ಚಿತ್ರ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ, ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬದಲು ಅದೊಂದು ಕೆ್ಟ್ಟ ಚಿತ್ರ ಎಂಬುದನ್ನು ಒಪ್ಪಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸತ್ಯದ ಪರವಾಗಿ ನಿಂತಿದ್ದಿಕ್ಕೆ ಅವರಿಗೆ ಧನ್ಯವಾದಗಳು ಎಂದು ಕೆಆರ್ಕೆ ಹೇಳಿದ್ದಾರೆ.