ಸಿನಿವಾಣಿ

ವರ್ಜಿನ್​ಗೆ ಹೊಸ ಹೆಸರು: ಕೃಷ್ಣ-ನಿಮಿಕಾ ಶೀಘ್ರಮೇವ ಕಲ್ಯಾಣ

ಬೆಂಗಳೂರು: ನಟ ‘ಡಾರ್ಲಿಂಗ್’ ಕೃಷ್ಣಗೆ ಲಕ್ ಕುದುರಿದೆ. ‘ಲವ್ ಮಾಕ್​ಟೇಲ್’ ಚಿತ್ರದ ಯಶಸ್ಸಿನ ಬಳಿಕ ಸಾಲುಸಾಲು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಇದೆಲ್ಲದರ ಜತೆಗೆ ಈ ಹಿಂದೆ ಅರ್ಧಕ್ಕೆ ನಿಂತಿದ್ದ ಸಿನಿಮಾಗಳೂ ಬಾಕಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗುತ್ತಿವೆ. ಕಳೆದ ವರ್ಷವೇ ಪ್ರಾರಂಭವಾಗಿದ್ದ ಚಿತ್ರವೊಂದು ಇದೀಗ ಹೊಸ ಹೆಸರಿನ ಜತೆಗೆ ಆಗಮಿಸಲು ಸಜ್ಜಾಗಿದೆ. ಆ ಚಿತ್ರವೇ ‘ವರ್ಜಿನ್’.

ಬಹುತೇಕ ಶೂಟಿಂಗ್ ಮುಗಿದಿರುವ ‘ವರ್ಜಿನ್’ ಸಿನಿಮಾ ಇದೀಗ ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಶೀರ್ಷಿಕೆ ಬದಲಾಯಿಸಿಕೊಂಡಿದೆ. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿತ್ತು. ಕೃಷ್ಣಗೆ ಜೋಡಿಯಾಗಿ ಅಹಲ್ಯ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ.

‘ಪಕ್ಕಾ ಕಮರ್ಷಿಯಲ್ ಶೈಲಿಯಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಕೌಟುಂಬಿಕ ಕಥೆ ಪ್ರಧಾನವಾಗಿದೆ. ಎಲ್ಲ ವರ್ಗದವರೂ ಈ ಸಿನಿಮಾ ನೋಡಬಹುದು. ಆ ಕಾರಣಕ್ಕೆ ವರ್ಜಿನ್ ಬದಲಾಗಿ ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಎಂಬ ಟೈಟಲ್ ಅಂತಿಮ ಮಾಡಲಾಗಿದೆ’ ಎಂದು ಶೀರ್ಷಿಕೆ ಬದಲಾವಣೆ ಹಿಂದಿನ ಅಸಲಿಯತ್ತನ್ನು ಹೇಳಿಕೊಳ್ಳುತ್ತಾರೆ ನಟಿ ನಿಮಿಕಾ ರತ್ನಾಕರ್.

ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಾಯ್ಡು, ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಶೇ.80 ಭಾಗ ಚಿತ್ರೀಕರಣ ಮುಗಿದಿದ್ದು, ಇನ್ನೇನು ಶೀಘ್ರದಲ್ಲಿ ಬಾಕಿ ಶೂಟಿಂಗ್​ಗೆ ತಂಡ ಮರುಚಾಲನೆ ನೀಡಲಿದೆ.