ಸಿನಿವಾಣಿ

ಕುಂಭಮೇಳದಲ್ಲಿ ಕೊರಗಜ್ಜ ತಂಡ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ನಿರ್ದೇಶಕ ಮತ್ತು ನಿರ್ಮಾಪಕರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶ ವಿದೇಶಗಳಿಂದ ಕೋಟ್ಯಂತರ ಜನ ಹೋಗುತ್ತಿದ್ದಾರೆ. ಅದರಿಂದ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಕನ್ನಡ ಸೇರಿ ವಿವಿಧ ಚಿತ್ರರಂಗಗಳ ನೂರಾರು ತಾರೆಯರು ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಿ ಪುನೀತರಾಗಿದ್ದಾರೆ.

ಇತ್ತೀಚೆಗಷ್ಟೆ "ಕೊರಗಜ್ಜ' ಚಿತ್ರದ ನಿರ್ದೇಶಕ ಸುಧೀರ್​ ಅತ್ತಾವರ್​, ನಿರ್ಮಾಪಕ ತ್ರಿವಿಕ್ರಮ್​ ಸಪಲ್ಯ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್​ ಶೆಟ್ಟಿ, ಗಂಗೆ, ಯಮುನಾ, ಸರಸ್ವತಿ ನದಿಗಳು ಸೇರುವ ತ್ರಿವೇಶನಿ ಸಂಗಮದಲ್ಲಿ ಮಿಂದೆದ್ದು, "ಕೊರಗಜ್ಜ' ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ "ಕಾಂತಾರ', "ಪುಷ್ಪ' ಚಿತ್ರಗಳು ದೇಶಾದ್ಯಂತ ಸುದ್ದಿಯಾಗಿವೆ. ಅದೇ ನಿಟ್ಟಿನಲ್ಲಿ ಪ್ಯಾನ್​ ಇಂಡಿಯಾ ಮೂಡಿಬರುತ್ತಿರುವ "ಕೊರಗಜ್ಜ' ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಉತ್ತರ ಭಾರತದ ಪ್ರೇಕ್ಷಕರಲ್ಲೂ ಕುತೂಹಲವಿದೆ.

ಹಾಲಿವುಡ್​ ಚಿತ್ರಗಳಲ್ಲೂ ನಟಿಸಿರುವ ಹೆಸರಾಂತ ಬಾಲಿವುಡ್​ ನಟ ಕಬೀರ್​ ಬೇಡಿ, ಅಂತಾರಾಷ್ಟ್ರೀಯ ನೃತ್ಯ ನಿರ್ದೇಶಕ ಸಂದೀಪ್​ ಸೊಪರ್ಕರ್​, ಹಿರಿಯ ನಟಿ ಭವ್ಯ, ನವೀನ್​ ಪಡೀಲ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. 800 ವರ್ಷಗಳ ಹಿಂದೆ ಅರ್ಥಾತ್​ 12ನೇ ಶತಮಾನದಲ್ಲಿ "ಕೊರಗಜ್ಜ'ನ ಕುರಿತ ಕಥೆ ಹೇಳುವ ಪ್ರಯತ್ನ ಚಿತ್ರತಂಡದ್ದು.