ವಿಜಯವಾಣಿ :
ಈ ವರ್ಷದ ಬಹುನಿರೀಕ್ಷಿತ ಕನ್ನಡ ಚಿತ್ರಗಳಲ್ಲಿ "ಕೊರಗಜ್ಜ' ಕೂಡ ಒಂದು. ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ ಈ ಸಿನಿಮಾ ಇದೀಗ ಹೊಸ ದಾಖಲೆ ಬರೆದಿದೆ. ಕೊರಗಜ್ಜ ವಿನ್ಯಾಸದ ಸ್ತಬ್ದಚಿತ್ರ ಮೈಸೂರು ದಸರಾ ಮೆರವಣಿಗೆಯಲ್ಲಿ ಸವಾರಿ ಹೊರಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಐತಿಹಾಸಿಕ ಮೈಸೂರು ದಸರಾದ 416 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಒಂದರ ಸ್ತಬ್ದಚಿತ್ರ ಪಾಲ್ಗೊಂಡಿರುವುದು ವಿಶೇಷ. ಬನ್ನಿ ಮಂಟಪದ ಬಳಿ ಲಾಂತರ ಜನರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ತ್ರಿವಿಕ್ರಮ್ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ನಲ್ಲಿ ನಿರ್ಮಿಸಲಾಗಿರುವ, ಸುಧೀರ್ ಅತ್ತಾವರ ನಿರ್ದೇಶನದ "ಕೊರಗಜ್ಜ' ಜೀವನಾಧಾರಿತ ಚಿತ್ರ, ಈಗಾಗಲೇ ತಾರಾಗಣ, ಮೇಕಿಂಗ್ ಸೇರಿ ಹಲವು ವಿಶೇಷತೆಗಳ ಮೂಲಕ ಸದ್ದು ಮಾಡಿದೆ. ಇದೀಗ ಬಿಡುಗಡೆಯಾಗಿರುವ ಟ್ರೇಲರ್ಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಸುಧೀರ್, "ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತುಳು ಭಾಷೆಯಲ್ಲಿ ಅಧಿಕೃತ ಆಡಳಿತ ಭಾಷೆಯಾಗಿ ಘೋಷಿಸಿ, ತುಳುನಾಡಿಗೆ ಅಗ್ರಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ, "ತುಳುನಾಡು ಕಂಗೊಳಿಸುತ್ತಿದೆ.. ಕರುನಾಡ ಕಂಪಿನಲಿ.. ಸಂಗೀತಮಯ ಘೋಷವಾಕ್ಯ ಮೆರವಣಿಗೆಯ ತುಂಬ ಆವರಿಸಿಕೊಂಡು "ಕೊರಗಜ್ಜ' ಸ್ತಬ್ದಚಿತ್ರಕ್ಕೆ ಇನ್ನಿಲ್ಲದ ಮೆರುಗು ನೀಡಿತು' ಎಂದು ಸಂತಸ ವ್ಯಕ್ತಪಡಿಸುತ್ತಾರೆ. ನಿರ್ದೇಶಕ ಸುಧೀರ್ ಅತ್ತಾವರ್, ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಜತೆಗೆ ಹಾಲಿವುಡ್ & ಬಾಲಿವುಡ್ನಲ್ಲಿ ಛಾಪು ಮೂಡಿಸಿರುವ ಹಿರಿಯ ನಟ ಕಬೀರ್ ಬೇಡಿ, ಮೀನಾ ಶೇಷಾದ್ರಿ, ಭವ್ಯ, ಕಾರ್ಯಕಾರಿ ನಿರ್ಮಾಪಕ & ಸಂಕಲನಕಾರ ವಿದ್ಯಾಧರ್ ಶೆಟ್ಟಿ, ಉದ್ಯಮಿ - ನೃತ್ಯಪಟು ಝುಲ್ಫಿಕರ್ ಸೇರಿ ಇನ್ನೂ ಹಲವರು ಟ್ಯಾಬ್ಲೋ ವಾಹನದಲ್ಲಿ ತೆರಳಿ ಸಂಭ್ರಮಿಸಿದರು.
ಪ್ಯಾನ್ ಇಂಡಿಯಾ ಬಹುಭಾಷೆಗಳಲ್ಲಿ ಮೂಡಿಬರುತ್ತಿರುವ "ಕೊರಗಜ್ಜ' ಚಿತ್ರವನ್ನು ಪ್ರಾರಂಭದಲ್ಲಿ 2ಡಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಸಿನಿಮಾ ಗುಣಮಟ್ಟ ನೋಡಿದ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯೊಂದು ಚಿತ್ರವನ್ನು 3ಡಿಗೆ ಮೇಲ್ದರ್ಜೆಗೇರಿಸುವಂತೆ ಸೂಚಿಸಿದೆ. 3ಡಿಯಲ್ಲಿ ಬರುವ ಚಿತ್ರಗಳು ಪ್ರೇಕ್ಷಕರಿಗೆ ಇನ್ನಷ್ಟು ಆಪ್ತವಾಗುತ್ತವೆ ಹಾಗೂ ಭಾವನಾತ್ಮಕ ಸಂಪರ್ಕ ಬೆಸೆಯುತ್ತವೆ ಎಂಬ ಕಾರಣಕ್ಕೆ ಚಿತ್ರತಂಡ "ಕೊರಗಜ್ಜ' ಚಿತ್ರವನ್ನು 2ಡಿಯಿಂದ 3ಡಿಯಲ್ಲಿ ರೂಪಿಸಿದ್ದು, ಸದ್ಯ ರಿಲೀಸ್ಗೆ ಸಿದ್ಧತೆ ನಡೆಸಿದೆ.
ಕನ್ನಡದಲ್ಲಿ ಅಂಡರ್&ವಾಟರ್ ಚಿತ್ರೀಕರಣ ಮಾಡಿರುವುದು ವಿರಳ. "ಒಂದು ಮುತ್ತಿನ ಕಥೆ' ಸೇರಿ ಕೆಲವೇ ಸಿನಿಮಾಗಳು ನೈಜವಾಗಿ ಅಂಡರ್ವಾಟರ್ ಶೂಟಿಂಗ್ ನಡೆಸಿವೆ. ವಿಶೇಷ ಅಂದರೆ "ಕೊರಗಜ್ಜ' ತಂಡ ಸಹ ಈ ಸಾಹಸಕ್ಕೆ ಕೈ ಹಾಕಿದ್ದು, ಕ್ಲೆಮ್ಯಾಕ್ಸ್ನ ಕೆಲ ದೃಶ್ಯಗಳನ್ನು ನೀರಿನಾಳದಲ್ಲಿ ಚಿತ್ರೀಕರಿಸಿರುವುದು ವಿಶೇಷ. ಕೇರಳದ ತಿರುವಂತನಪುರಂನ ವಿಸ್ಮಯ ಸ್ಟುಡಿಯೋದಲ್ಲಿ ಅದಕ್ಕೆಂದೇ ವಿಶೇಷ ಸೆಟ್ ನಿರ್ಮಿಸಿ ಶೂಟಿಂಗ್ ನಡೆಸಲಾಗಿದೆ. ಛಾಯಾಗ್ರಾಹಕ ಮನೋಜ್ ಪಿಳ್ಳೆ ನೀರಿನಾಳಕ್ಕಿಳಿದು ನಾಲ್ಕು ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. 30 ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈನವಿರೇಳಿಸುವ ಸಾಹಸಮಯ ದೃಶ್ಯದಲ್ಲಿ ಶ್ರುತಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ಅವರು ಸುಮಾರು 15 ದಿನಗಳ ಕಾಲ ತರಬೇತಿ ಪಡೆದಿದ್ದಾರೆ. ಸೆಟ್ನಲ್ಲಿ ಸ್ಕೂಬಾ ಡೈವರ್ಗಳು, ಆಂಬುಲೆನ್ಸ್, ವೈದ್ಯರ ತಂಡದ ಸಹಾಯದೊಂದಿಗೆ ಶೂಟಿಂಗ್ ನಡೆಸಲಾಗಿದೆ.
50ಕ್ಕೂ ಅಧಿಕ ಟ್ಯಾಬ್ಲೋಗಳ ಭವ್ಯ ಮೆರವಣಿಗೆಯಲ್ಲಿ ಕೊರಗಜ್ಜ ಚಿತ್ರದ ಟ್ಯಾಬ್ಲೋ ಅಂಬಾರಿಯ ಸಮೀಪ ಸಾಗುಬರುವ ಅಪರೂಪದ ಗೌರವಕ್ಕೆ ಸಾಯಾಯಿತು. ಕೊನೆಗೆ ಬನ್ನಿ ಮಂಟದ ಬಳಿ ಟ್ರೇಲರ್ ಬಿಡುಗಡೆ ಮಾಡಿದ್ದು ಮರೆಯಲಾರದ ನೆನಪು.- ಸುಧೀರ್ ಅತ್ತಾವರ್, ನಿರ್ದೇಶಕ