ಸಿನಿವಾಣಿ

ಜ್ಯೂ ಎನ್​ಟಿಆರ್​ ಗೆಟಪ್​ ಬದಲಾಯಿಸದಿದ್ದರೆ ಪ್ರತಿಭಟನೆ: ಕೊಮರಂ ಭೀಮ್​ ಮೊಮ್ಮಗ

ಹೈದರಾಬಾದ್​: ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್​ಆರ್​ಆರ್​' ಚಿತ್ರದ ಜ್ಯೂನಿಯರ್​ ಎನ್​ಟಿಆರ್​ ಪಾತ್ರದ ಟೀಸರ್​ ಬಿಡುಗಡೆಯಾಗಿರುವುದು ಗೊತ್ತೇ ಇದೆ. ಇದೀಗ ಆ ಪಾತ್ರದ ಕುರಿತಾಗಿ ವಿವಾದವೊಂದು ಹುಟ್ಟಿಕೊಂಡಿದೆ.

ಪ್ರಮುಖವಾಗಿ, ಕೊಮರಮ್​ ಭೀಮ್​ ಪಾತ್ರದ ಗೆಟಪ್​ ಬದಲಾಯಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗಬಹುದು ಎಂದು ಕೊಮರಮ್​ ಭೀಮ್​ ಅವರ ಮೊಮ್ಮಗ ಸೋನೆ ರಾವ್​ ಹೇಳಿದ್ದಾರೆ.

ಈ ಚಿತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಅವರು ಆದಿವಾಸಿ ನಾಯಕ ಕೊಮರಮ್​ ಭೀಮ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್​ನಲ್ಲಿ ಆ ಪಾತ್ರವು ಮುಸ್ಲಿಮರ ಗೆಟಪ್​ನಲ್ಲಿರುವ ದೃಶ್ಯವೊಂದಿದೆ. ಈ ದೃಶ್ಯದಿಂದ ಇತಿಹಾಸವನ್ನು ತಿರುಚಿದಂತಾಗುವುದರಿಂದ, ಈ ದೃಶ್ಯವನ್ನು ಈಗಲೇ ಕತ್ತರಿಸಬೇಕು ಎಂದು ಆದಿವಾಸಿಗಳು ಇತ್ತೀಚೆಗೆ ನಿರ್ದೇಶಕ ರಾಜಮೌಳಿ ಅವರಿಗೆ ಆಗ್ರಹಿಸಿದ್ದರು.

ಇದೀಗ, ಕೊಮರಮ್​ ಭೀಮ್​ ಅವರ ಮೊಮ್ಮಗ ಸೋನೆ ರಾವ್​ ಅವರೇ ಈ ಕುರಿತು ಮಾತನಾಡಿದ್ದಾರೆ. ಭೀಮ್​ ಅವರನ್ನು ಮುಸ್ಲಿಮ್​ ಗೆಟೊ್​ನಲ್ಲಿ ತೋರಿಸಿರುವುದರಿಂದ, ಅವರನ್ನು ಆರಾಧಿಸುವ ಸಾವಿರಾರು ಜನ ಆದಿವಾಸಿಗಳು ಸಾಕಷ್ಟು ನೊಂದಿದ್ದಾರೆ, ಹಾಗಾಗಿ ಈ ಕೂಡಲೇ ಅದನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಜ್ಯೂನಿಯರ್​ ಎನ್​ಟಿಆರ್ ಅವರ ಟೀಸರ್​ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು ಸಾಕಷ್ಟು ಜನಪ್ರಿಯವಾಗಿದೆ. ವಿಶೇಷವೆಂದರೆ, ಈ ಟೀಸರ್​ಗೆ ರಾಮ್​ಚರಣ್​ ತೇಜ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ, ಟೀಸರ್​ ತೆಲುಗು, ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಿಗೂ ರಾಮ್​ಚರಣ್​ ಧ್ವನಿ ನೀಡಿದ್ದಾರೆ. ಈಗಾಗಲೇ ಈ ಟೀಸರ್​ಗಳು ಯೂಟ್ಯೂಬ್​ನಲ್ಲಿ ಸಖತ್​ ವೈರಲ್​ ಆಗಿವೆ.

ಮೂಲಗಳ ಪ್ರಕಾರ, 'ಆರ್​ಆರ್​ಆರ್​' ಚಿತ್ರದ ಸ್ಯಾಟಿಲೈಟ್​ ಮತ್ತು ಡಿಜಿಟಲ್​ ಹಕ್ಕುಗಳನ್ನು ಕೊಳ್ಳುವುದಕ್ಕೆ ಸ್ಟಾರ್​ ನೆಟ್​ವರ್ಕ್​ ಮುಂದಾಗಿದ್ದು, ಈಗಾಗಲೇ ಚಿತ್ರತಂಡದವರ ಜತೆಗೆ ಮಾತುಕತೆ ನಡೆಸಿದೆಯಂತೆ. ಅದರ ಪ್ರಕಾರ, ಸ್ಯಾಟಿಲೈಟ್​ ಮತ್ತು ಡಿಜಿಟಲ್​ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ, ಸ್ಟಾರ್​ ಸಮೂಹ 200 ಕೋಟಿ ರೂಪಾಯಿಗಳನ್ನು ಕೊಡುತ್ತಿದೆ ಎಂದು ಹೇಳಲಾಗುತ್ತಿದೆ.