ಬೆಂಗಳೂರು: ನಟ ಕೋಮಲ್ ಕುಮಾರ್ ಅವರನ್ನು ಸಿನಿಮಾ ಪ್ರೇಕ್ಷಕರು ಹಾಸ್ಯನಟನಾಗಿ ನೋಡಿದ್ದೇ ಹೆಚ್ಚು. ಆದರೆ, ಇತ್ತೀಚಿನ ಕೆಲ ಸಿನಿಮಾಗಳಲ್ಲಿ ಆಕ್ಷನ್ ಅವತಾರದಲ್ಲಿ ಎದುರಾಗಿದ್ದರೂ, ಅದು ಅವರ ಕೈ ಹಿಡಿಯಲಿಲ್ಲ. ಹಾಗಾಗಿ ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರವೇ ಉಳಿದಿದ್ದರು. ಇದೀಗ ಕೋಮಲ್ ಕಡೆಯಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮತ್ತೆ ಹಳೇ ಲಯಕ್ಕೆ ಮರಳುತ್ತಿದ್ದಾರೆ.
ಈಗಾಗಲೇ ಸಾಲು ಸಾಲು ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ವಪಕ ಟಿ.ಆರ್. ಚಂದ್ರಶೇಖರ್, ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು ಅದರಲ್ಲಿ ಕೋಮಲ್ ನಾಯಕನಾಗಿ ನಟಿಸುವುದು ಅಧಿಕೃತವಾಗಿದೆ. ಪಕ್ಕಾ ಕಾಮಿಡಿ ಶೈಲಿಯಲ್ಲಿ ಕಥೆ ತಯಾರಾಗಿದ್ದರಿಂದ ಕೋಮಲ್ ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ಅವರನ್ನೇ ಕರೆತಂದಿದ್ದಾರೆ. ‘ಇದೊಂದು ಪಕ್ಕಾ ಹಾಸ್ಯ ಪ್ರಧಾನ ಸಿನಿಮಾ. ಈ ಹಿಂದಿನ ಸಿನಿಮಾಗಳಲ್ಲಿ ಕೋಮಲ್ ಹೇಗೆ ಕಾಮಿಡಿ ಕಚಗುಳಿ ಇಡುತ್ತಿದ್ದರೋ, ಇಲ್ಲಿಯೂ ಆ ಮ್ಯಾನರಿಸಂ ಇರಲಿದೆ.
ಸದ್ಯಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಕೆಲಸ ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಶೂಟಿಂಗ್ ಶುರುಮಾಡಲಿದ್ದೇವೆ’ ಎಂಬುದು ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಮಾತು. ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್ ನಂ.8 ಎಂಬ ಟೈಟಲ್ ಇಡಲಾಗಿದ್ದು, ಶೀಘ್ರದಲ್ಲಿ ಶೀರ್ಷಿಕೆ ಅನಾವರಣವನ್ನೂ ಮಾಡಲಿದ್ದಾರಂತೆ. ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ಕೆ.ಎಲ್. ರಾಜ್ ಶೇಖರ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರೆ.