ಸಿನಿವಾಣಿ

ಸಮಬಾಳು - ಸಮಪಾಲು ; ತೆರೆಯ ಮೇಲೆ ಮೊದಲ ಬಾರಿ ರೈತನಾದ ಕೃಷಿಕ ಕಿಶೋರ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡದಲ್ಲಿ 60, ತಮಿಳಿನಲ್ಲಿ 40, ತೆಲುಗಿನಲ್ಲಿ 20 ಸೇರಿ ಮಲಯಾಳಂ ಚಿತ್ರಗಳಲ್ಲಿ ಮಿಂಚಿರುವ ನಟ ಕಿಶೋರ್​, ಕೆಲ ವೆಬ್​ಸರಣಿಗಳಲ್ಲೂ ನಟಿಸಿದ್ದಾರೆ. ಅವರು ಕೆಲ ವರ್ಷಗಳಿಂದ ಕೃಷಿಯಲ್ಲೂ ತೊಡಗಿರುವುದು ಗೊತ್ತಿದೆ. ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕಿಶೋರ್​, ಇದುವರೆಗೆ ತೆರೆಯ ಮೇಲೆ ರೈತನ ಪಾತ್ರ ಮಾಡಿರಲಿಲ್ಲ. ಆ ಅವಕಾಶ ಅವರಿಗೆ ಸತ್ಯನಾಥ್​ ನಿರ್ದೇಶನದ "ಕಬಂಧ' ಚಿತ್ರದಲ್ಲಿ ದೊರೆತಿದೆ. ಪಾತ್ರದ ಬಗ್ಗೆ, "ರೈತರ ಸಮಸ್ಯೆಗಳ ಕುರಿತ ಸಿನಿಮಾ. ಪುಟ್ಟ ಪಾತ್ರವಾದರೂ ಕೃಷಿಕನ ಪಾತ್ರ. ಹಾರರ್​ ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗುವ ಜಾನರ್​. ಆ ಜಾನರ್​ನಲ್ಲಿ ರಾಸಾಯನಿಕ ಬಳಕೆಯ ಬಗ್ಗೆ ತಿಳಿಸುವ ಪ್ರಯತ್ನ' ಎಂದು ಮಾಹಿತಿ ನೀಡುತ್ತಾರೆ ಕಿಶೋರ್​.

ಎಲ್ಲವೂ ವಿಷಮಯ
ಕೃಷಿಯಲ್ಲಿ ರಾಸಾಯನಿಕಗಳ ಬಳಿಕೆಯ ಬಗ್ಗೆ ಕಿಶೋರ್​, "ನೀರು, ಗಾಳಿ, ಆಹಾರ ಎಲ್ಲವೂ ಟಾಕ್ಸಿಕ್​ ಆಗಿದೆ. ಎಲ್ಲದರಲ್ಲೂ ರಾಸಾಯನಿಕವಿದೆ. ಜಾಗೃತಿ ಮೂಡಿಸಿದರಷ್ಟೇ ನಮಗೆ ಉಳಿಗಾಲ. ನಮ್ಮ ಮಕ್ಕಳಿಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ. "ನೀರನ್ನು ಕಾರ್ಖಾನೆಗಳಲ್ಲ ಕೃಷಿ ಮಲಿನಗೊಳಿಸುತ್ತಿದೆ' ಎಂಬ ಫುಕುವೊಕಾ ಮಾತು ಅಕ್ಷರಶಃ ಸತ್ಯ. ಕೃಷಿಯಲ್ಲಿ ಬಳಸುವ ರಾಸಾಯನ ನೀರು, ಗಾಳಿ, ಮಣ್ಣು ಸೇರಿ ಎಲ್ಲವೂ ಮಲಿನಗೊಳ್ಳುತ್ತಿದೆ. ಆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ' ಎಂದು "ಕಬಂಧ' ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.

ದ ಬೆಸ್ಟ್​ ಹಣ್ಣುಗಳು
ಬನ್ನೇರುಟ್ಟ ಮತ್ತು ಮಾಗಡಿಯಲ್ಲಿ ತೋಟ ಮಾಡುತ್ತಿರುವ ಕಿಶೋರ್​, "ಎಲ್ಲ ಹಣ್ಣಿನ ಗಿಡಗಳನ್ನೂ ನ್ಯಾಚುರಲ್​ ಆಗಿ ಬೆಳೆಸಿದ್ದೇವೆ. ಹಣ್ಣುಗಳು ಅಷ್ಟು ಚೆನ್ನಾಗಿರುತ್ತೆ ಅಂತ ನನ್ನ ಜೀವನದಲ್ಲಿ ಅಂದುಕೊಂಡಿರಲಿಲ್ಲ. ಬಟರ್​ ಫ್ರೂಟ್​, ಕಿತ್ತಳೆ, ಹಲಸು ದ ಬೆಸ್ಟ್​ ಹಣ್ಣುಗಳನ್ನು ಬೆಳೆದು ತಿನ್ನುತ್ತೇವೆ. ಜತೆಗೆ ಪ್ರಯೋಗ ಮಾಡುತ್ತಿರುತ್ತೇನೆ. ಆದರೆ, ಯಾವುದೂ ವರ್ಕ್​ ಆಗುತ್ತಿಲ್ಲ' ಎನ್ನುತ್ತಾರೆ.

ಸಾಹಿತ್ಯ- ಸಿನಿಮಾ ಸಂಬಂಧ ಕಳಚಿದೆ
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ ಎಂಬುದರ ಬಗ್ಗೆ ಕಿಶೋರ್​, "ನಾವು ಪ್ರೇಕ್ಷಕರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಆಗಾಗ ಉತ್ತಮ ಸಿನಿಮಾಗಳನ್ನು ಕೊಡುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜತೆಗೆ ಜನ ಸಿನಿಮಾಗಳನ್ನು ಪರ್ಸನಲ್​ ಆಗಿ ತೆಗೆದುಕೊಳ್ಳುತ್ತಾರೆ. ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು ಸೇರಿ ಈ ಬಗ್ಗೆ ಚರ್ಚಿಸಬೇಕು. ಮೊದಲು ಸಾಹಿತ್ಯ ಲೋಕಕ್ಕೂ ಸಿನಿಮಾಗೂ ನಂಟಿರುತ್ತಿತ್ತು. ಆದರೆ, ಈಗ ಸಾಹಿತಿಗಳ ನಂಟು ಕಳೆದುಕೊಂಡಿದ್ದೇನೆ. ಮಲಯಾಳಂನಲ್ಲಿ ಆ ನಂಟು ಇನ್ನೂ ಇದೆ. ನಮ್ಮ ಜನ ಸಾಹಿತ್ಯದಿಂದ ದೂರವಾಗಿರುವ ಕಾರಣ ಇಲ್ಲಿನ ಸಂಸತಿ, ಜೀವನಶೈಲಿಯಿಂದ ದೂರವಾಗಿದ್ದಾರೆ ಅನ್ನಿಸುತ್ತದೆ. ಹೀಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿ ಒಂದು ಸಮಗ್ರ ಪರಿಹಾರ ಕಂಡುಕೊಳ್ಳಬೇಕು' ಎನ್ನುತ್ತಾರೆ.

ಸಂವಿಧಾನಬದ್ಧ ಆಲೋಚನೆಗಳು ಸಿನಿಮಾ ಆಗಬೇಕು
ಕಿಶೋರ್​ಗೆ ಪರಭಾಷೆಗಳಿಂದಲೂ ಹೆಚ್ಚೆಚ್ಚು ಅವಕಾಶಗಳು ಬರುತ್ತಿವೆ. "ಕನ್ನಡದಲ್ಲಿ ಎಸ್​. ಮಹೇಂದರ್​ ಜತೆ ಒಂದು ಸಿನಿಮಾ ಮಾತುಕತೆ ನಡೀತಿದೆ. ತಮಿಳಿನಲ್ಲಿ ಎರಡು ಸ್ಟಾರ್​ ಚಿತ್ರಗಳನ್ನು ಮಾಡಲಿದ್ದೇನೆ. ಕಥೆ ಚೆನ್ನಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಪಾತ್ರ ನನ್ನ ನಂಬಿಕೆಗೆ ವಿರುದ್ಧವಿದ್ದು, ಕಥೆ ಪೂರಕವಾಗಿದ್ದರೂ ಮಾಡಿದ್ದೇನೆ. ಆದರೆ, ಸಂವಿಧಾನಬದ್ಧವಾದ ಆಲೋಚನೆಯ ಸಮಪಾಲು, ಸಮಬಾಳು ಆಶಯವಿರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ' ಎನ್ನುತ್ತಾರೆ.

ಡೈರೆಕ್ಟರ್​ ಕಿಶೋರ್​
"ಸಿನಿಮಾ ನಿರ್ದೇಶಿಸುವ ಸರ್ಕಸ್​ ನಡೀತಿದೆ. ಅದು ಎಲ್ಲಿಗೆ ತಲುಪುತ್ತೆ ಅಂತ ನನಗೂ ಸ್ಪಷ್ಟತೆ ಇಲ್ಲ' ಎಂದು ನಗುವ ಕಿಶೋರ್​, "ಇತ್ತೀಚೆಗಷ್ಟೆ ಕೆಲ ಲೊಕೇಷನ್​ ನೋಡಿಕೊಂಡು ಬಂದಿದ್ದೇನೆ. ವಲಸಿಗನ ಕುರಿತ ಕಥೆ. ಥ್ರಿಲ್ಲರ್​ ಜಾನರ್​ ಆದರೂ ಹಲವು ಅಂಶಗಳು ಚಿತ್ರದಲ್ಲಿವೆ. ಈ ವರ್ಷ ಪೂರ್ಣಗೊಳಿಸಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ಸೆನ್ಸಾರ್​ಶಿಪ್​ ಪ್ರಜಾಪ್ರಭುತ್ವಕ್ಕೆ ವಿರುದ್ಧ
ಸೆನ್ಸಾರ್​ಗೆ ಒಳಪಡುವ ಸಿನಿಮಾಗಳ ಜತೆ ಸೆನ್ಸಾರ್​ ಆಗದ ವೆಬ್​ಸರಣಿಗಳಲ್ಲೂ ನಟಿಸಿರುವ ಕಿಶೋರ್​, "ಇಮ್ತಿಯಾಜ್​ ಅಲಿ, ರಾಜ್​- ಡಿಕೆ, ವಸಂತ ಬಾಲನ್​ ನಿರ್ದೇಶನದ ಸರಣಿಗಳಲ್ಲಿ ನಟಿಸಿದ್ದೇನೆ. ಅಲ್ಲಿ ನಿರ್ದೇಶಕರಿಗೆ ಸ್ವಾತಂತ್ರ್ಯವಿರುತ್ತದೆ. ಏನು ಹೇಳಬೇಕು ಅಂತ ಅಂದುಕೊಂಡಿದ್ದೀವೋ ಅದನ್ನು ಹೇಳಬಹುದು. ತಂಡಗಳೇ ಸ್ವ-ಸೆನ್ಸಾರಿಂಗ್​ ಮಾಡಿಕೊಂಡು ಸರಣಿ ಮಾಡುತ್ತಿದ್ದಾರೆ. ಆದರೆ, ಸಿನಿಮಾದಲ್ಲಿ ಹಾಗಿಲ್ಲ. ಸೆನ್ಸಾರ್​ಶಿಪ್​ ಇಲ್ಲದೇ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲು ಜನರಿಗೆ ಸ್ವಾತಂತ್ರ್ಯ ನೀಡಬೇಕು. ಸೆನ್ಸಾರ್​ ಪ್ರಜಾಪ್ರಭುತ್ವದ ವಿರುದ್ಧವಾದುದು. ನೀವು ಇದನ್ನು ನೋಡಬೇಕು, ಇದನ್ನು ನೋಡಬಾರದು ಅಂತ ಮತ್ತೊಬ್ಬರು ತೀರ್ಮಾನಿಸಬಾರದು' ಎನ್ನುತ್ತಾರೆ.