ಸಿನಿವಾಣಿ

ಪ್ರೀತಿಯ ಪುತ್ರಿ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್​ ಭಾವನಾತ್ಮಕ ವಿಶ್​; 'ಹೇಗಪ್ಪಾ ನಂಬೋದು...' ಎಂದು ಅವರು ಹೇಳಿದ್ದೇಕೆ?

16ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿರುವ ಪುತ್ರಿ ಸಾನ್ವಿಗೆ ನಟ ಕಿಚ್ಚ ಸುದೀಪ್​ ಅವರು ಕವನದ ಮೂಲಕ ಭಾವನಾತ್ಮಕವಾಗಿ ಶುಭ ಹಾರೈಸಿದ್ದಾರೆ. ' ಮತ್ತೆ ಮಗುವಾಗು' ನೀನು ಎಂದು ಪ್ರೀತಿಯಿಂದ ಕೇಳಿಕೊಂಡಿದ್ದಾರೆ.
ಸಾನ್ವಿ ಪುಟ್ಟ ಮಗುವಾಗಿದ್ದಾಗಿನಿಂದ ಇಲ್ಲಿಯವರೆಗಿನ ಫೋಟೋ ಕೊಲ್ಯಾಜ್​ ಮಾಡಿ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಸುದೀಪ್​ ಪ್ರೀತಿಯ ಮಗಳಿಗಾಗಿ ಬರೆದ ಕವನ ಹೀಗಿದೆ...

ನೆನ್ನೆ ಮೊನ್ನೆ ಇದ್ದ ಹಾಗಿದೆ
ಹೇಗಪ್ಪಾ ನಂಬೋದು...
ನನ್ನ ಮಗಳೀಗ..ಹದಿನಾರು ವರುಷ.
ನೀ ಇಟ್ಟ ಅಂಬೆಗಾಲು
ಮುದ್ದಾದ ಮೊದಲುಗಳು
ಕೂಡಿಟ್ಟಿರುವೆ ನಾ...ಒಂದೊಂದು ನಿಮಿಷ
ಎದೆಯೆತ್ತರ ಬೆಳೆದಿರೋ ಕನಸು ನೀನು
ನಿನ್ನಿಂದಲೇ ಕಲಿಯುವ ಕೂಸು ನಾನು
ಆಸೆಬುರುಕ ಅಪ್ಪ ನಾನು
ಮತ್ತೆ ಮಗುವಾಗು ನೀನು...

ಮಗಳು ನಿನ್ನೆ ಮೊನ್ನೆ ಹುಟ್ಟಿದ್ದಾಳೆ ಎಂದೆನಿಸುತ್ತದೆ. ಆದರೆ ನೋಡನೋಡುತ್ತಿದ್ದಂತೆ 16 ವರ್ಷ ತುಂಬಿಬಿಟ್ಟಿತು. ಇದನ್ನು ನಂಬಲೇ ಆಗುತ್ತಿಲ್ಲ. ನನಗೆ ಅವಳು ಕೊಟ್ಟ ನೆನಪಿನ ಒಂದೊಂದು ನಿಮಿಷವನ್ನೂ ಕೂಡಿಟ್ಟಿದ್ದೇನೆ. ನನ್ನ ಕನಸು ಅವಳು..ಎದೆಯೆತ್ತರಕ್ಕೆ ಬೆಳೆದು ನಿಂತಿದ್ದಾಳೆ ಎಂಬ ಆಶಯವುಳ್ಳ ಸುಂದರ ಕವನದ ಮೂಲಕ ಬರ್ತ್​ ಡೇ ವಿಶ್​ ತಿಳಿಸಿದ್ದಾರೆ.