ಕಿಚ್ಚ ಸುದೀಪ್ ಅವರು ಸಲ್ಮಾನ್ ಖಾನ್ ಅವರ ದಬಾಂಗ್-3 ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ ಬಳಿಕ ಇವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಬೆಳೆದಿದೆ. ದಬಾಂಗ್ 3 ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲೂ ಸುದೀಪ್ ಅವರು ತಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.
ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ಗೆ ತಮ್ಮ ಪ್ರೀತಿಯ ನಾಯಿಯ ಚಿತ್ರವನ್ನು ಪೇಂಟಿಂಗ್ ಮಾಡಿಸಿದ್ದ ಟಿ-ಶರ್ಟ್ವೊಂದನ್ನು ಉಡುಗೊರೆಯನ್ನಾಗಿ ನೀಡಿದ್ದರು. ಈಗ ಮತ್ತೊಂದು ಸರ್ಪ್ರೈಸ್ ಗಿಫ್ಟ್ನ್ನು ನೀಡಿದ್ದಾರೆ. ಈ ಬಾರಿ ಕೊಟ್ಟಿದ್ದು ತುಸು ದುಬಾರಿ ಉಡುಗೋರೆ !
ಕಿಚ್ಚ ಸುದೀಪ್ಗೆ ಸಲ್ಮಾನ್ ಖಾನ್ ಈ ಸಲ ಬಿಎಂಡಬ್ಲ್ಯೂ ಎಂ5 ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಇದನ್ನು ನೋಡಿದ ಕಿಚ್ಚ ಫುಲ್ ಖುಷಿಯಾಗಿದ್ದು, ತಮ್ಮ ಸಂತೋಷವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ನಾವು ಒಳ್ಳೆಯದನ್ನು ಮಾಡಿದಾಗ ನಮಗೂ ಖಂಡಿತ ಒಳ್ಳೆಯದಾಗುತ್ತದೆ. ಈ ಸಾಲುಗಳನ್ನು ಇನ್ನಷ್ಟು ನಂಬುವಂತೆ ಮಾಡಿದ್ದು ಇಂದು ಬಿಎಂಡಬ್ಲ್ಯೂ ಎಂ5 ಕಾರಿನೊಂದಿಗೆ ನಮ್ಮ ಮನೆಗೆ ಬಂದ ಸಲ್ಮಾನ್ ಖಾನ್ ಸರ್. ಇದೊಂದು ಅಚ್ಚರಿ ನನಗೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ನನಗೆ ಹಾಗೂ ನನ್ನ ಕುಟುಂಬಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ತುಂಬುಹೃದಯದ ಕೃತಜ್ಞತೆಗಳು. ನಿಮ್ಮ ಜತೆ ಕೆಲಸ ಮಾಡಿದ್ದು, ನೀವು ನಮ್ಮ ಮನೆಗೆ ಭೇಟಿ ನೀಡಿದ್ದು ನನಗೆ ತುಂಬ ಸಂತೋಷ ತಂದಿದೆ. ಹಾಗೇ ನನ್ನ ಗೌರವ ಹೆಚ್ಚಾಗಿದೆ ಎಂದು ಸುದೀಪ್ ಅವರು ಸಲ್ಮಾನ್ ಖಾನ್ಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದರೊಂದಿಗೆ ಹೊಸ ಕಾರಿನಲ್ಲಿ ಸಲ್ಮಾನ್ ಖಾನ್ ಜತೆ ತಾವು ಕುಳಿತ ಫೋಟೋಗಳನ್ನು ಕಿಚ್ಚ ಸುದೀಪ್ ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಬರ್ತ್ ಡೇಯಲ್ಲಿ ಕಿಚ್ಚ ಸುದೀಪ್ ಫ್ಯಾಮಿಲಿ ಭಾಗಿಯಾಗಿತ್ತು. ಹಾಗೇ ಸಲ್ಮಾನ್ ಖಾನ್ ಬೆಂಗಳೂರಿಗೆ ಬಂದಾಗ ಸುದೀಪ್ ಅವರ ತಂದೆ-ತಾಯಿಯನ್ನೂ ಭೇಟಿಯಾಗಿದ್ದರು.