ಸಿನಿವಾಣಿ

MAX Review: ಮೆರ್ರಿ ಕ್ರಿಸ್​ಮ್ಯಾಕ್ಸ್​, ಮೆರ್ರಿ ಕಿಚ್ಚ ಮಾಸ್​!

ಚಿತ್ರ: ಮ್ಯಾಕ್ಸ್​

ನಿರ್ದೇಶನ: ವಿಜಯ್​ ಕಾರ್ತಿಕೇಯ

ನಿರ್ಮಾಣ: ಕಲೈಪುಲಿ ತನು, ಕಿಚ್ಚ ಸುದೀಪ್​

ತಾರಾಗಣ: ಕಿಚ್ಚ ಸುದೀಪ್​, ಸುಕೃತಾ, ಸಂಯುಕ್ತಾ, ಉಗ್ರಂ ಮಂಜು, ವರಲಕ್ಷಿ$್ಮ, ಪ್ರಭಾಕರ್​, ಸುನಿಲ್​, ಇಳವರಸು, ರೆಡಿನ್​ ಕಿಂಗ್​ಸ್ಲಿ ಮುಂತಾದವರು

| ಹರ್ಷವರ್ಧನ್​ ಬ್ಯಾಡನೂರು

"ಇದುವರೆಗೂ ಡ್ಯೂಟಿಗೆ ರಿಪೋರ್ಟ್​ ಮಾಡಿಕೊಂಡ ಮೇಲೆ ಸಸ್ಪೆಂಡ್​ ಆಗ್ತಿದ್ದೆ. ಆದ್ರೆ, ನಿಮ್​ಗಳ ಸಹವಾಸ ಮಾಡಿ ಈ ಸಾರಿ ಡ್ಯೂಟಿಗೆ ರಿಪೋರ್ಟ್​ ಮಾಡ್ಕೊಳ್ಳೋಕೂ ಮುಂಚೇನೇ ಸಸ್ಪೆಂಡ್​ ಆಗ್ತೀನಿ ಅನ್ಸುತ್ತೆ' ಅಂತಾನೆ ಪೊಲೀಸ್​ ಅಧಿಕಾರಿ ಅರ್ಜುನ್​ ಮಹಾಕ್ಷಯ್​ ಅಲಿಯಾಸ್​ ಮ್ಯಾಕ್ಸ್​ (ಸುದೀಪ್​). ಸಸ್ಪೆಂಡ್​ ಆಗಿದ್ದ ಮ್ಯಾಕ್ಸ್​ನ ಬೆಂಗಳೂರು ಹೊರವಲಯದ ಪೊಲೀಸ್​ ಠಾಣೆಗೆ ವರ್ಗಾವಣೆ ಮಾಡಲಾಗಿರುತ್ತದೆ. ಆತ ಮಾರನೆಯ ದಿನ ಬೆಳಗ್ಗೆ ಡ್ಯೂಟಿಗೆ ರಿಪೋರ್ಟ್​ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ, ನಾಕಾಬಂದಿ ಹಾಕಿದ್ದ ಠಾಣೆಯ ಸಿಬ್ಬಂದಿ ಮೇಲೆ ಡ್ರಗ್ಸ್​ ನಶೆಯಲ್ಲಿ ಮಿನಿಸ್ಟರ್​ಗಳ ಮಕ್ಕಳು ಕೈಮಾಡಿರುತ್ತಾರೆ. ಸಚಿವರಾದ ಪರಶುರಾಮ್​ ಮತ್ತು ಡೇನಿಯಲ್​ ಮಕ್ಕಳಾದ ಮೈಕಲ್​ ಮತ್ತು ವೀರಾ ಇಬ್ಬರಿಗೂ ರಡಿಸಿ ಮ್ಯಾಕ್ಸ್​ ಲಾಕಪ್​ನಲ್ಲಿ ಹಾಕಿರುತ್ತಾನೆ. ಸಿಎಂ ಗಾದಿ ಮೇಲೆ ಕಣ್ಣುಹಾಕಿರುವ ಈ ಇಬ್ಬರೂ ಸಚಿವರು ಎರಡು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಎಲ್ಲ ಶಾಸಕರನ್ನು ಒಂದೆಡೆ ಸೇರಿಸುತ್ತಿರುತ್ತಾರೆ. ಇದರ ನಡುವೆ ಮಕ್ಕಳು ಹೀಗೆ ಜೈಲುಪಾಲಾಗುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಅವರನ್ನು ಬಿಡಿಸಿಕೊಳ್ಳಲು ಬರುವವರಿಗೆ ಸ್ಟೇಷನ್​ನಲ್ಲಿ ಒಂದು ಶಾಕ್​ ಕಾದಿರುತ್ತದೆ. ಅದೇನು? ಮೈಕಲ್​, ವೀರಾ ಏನಾದರು? ಮುಂದೇನು? "ಮ್ಯಾಕ್ಸ್​' ನೋಡಿ...

ಒಂದೇ ರಾತ್ರಿ 12 ತಾಸಿನಲ್ಲಿ ನಡೆಯುವ ಕಥೆ "ಮ್ಯಾಕ್ಸ್​'. ಟ್ರೇಲರ್​ ರಿಲೀಸ್​ ಆದಾಗ ತಮಿಳಿನ "ಕೈದಿ' ಚಿತ್ರಕ್ಕೆ "ಮ್ಯಾಕ್ಸ್​'ಅನ್ನು ಹೋಲಿಸಲಾಗಿತ್ತಾದರೂ, ಒಂದೇ ರಾತ್ರಿ ಪೊಲೀಸ್​ ಠಾಣೆಯಲ್ಲಿ ನಡೆಯುವ ಕಥೆ ಎಂಬುದನ್ನು ಹೊರತುಪಡಿಸಿದರೆ, ಈ "ಮ್ಯಾಕ್ಸ್​', "ಕೈದಿ'ಯನ್ನೂ ಮೀರಿಸುತ್ತಾನೆ. ವಿಜಯ್​ ಕಾರ್ತಿಕೇಯ ಚೊಚ್ಚಲ ನಿರ್ದೇಶನದಲ್ಲಿಯೇ ಒಂದು ಮಾಸ್​ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. 133 ನಿಮಿಷಗಳ ಈ ಚಿತ್ರದಲ್ಲಿ ಹಲವು ಟ್ವಿಸ್ಟ್​ ಮತ್ತು ರ್ಟನ್​ಗಳು ಸೀಟಂಚಲ್ಲಿ ಕೂರಿಸುತ್ತವೆ. ಕಿಚ್ಚ ಸುದೀಪ್​ ಅವರ ಡೈಲಾಗ್​, ಆ್ಯಕ್ಷನ್​, ಬಾಡಿ ಲಾಂಗ್ವೇಜ್​, ಸ್ಟೆ$ಲಿಶ್​ ಲುಕ್​ "ಮ್ಯಾಕ್ಸ್​'ನ ಮ್ಯಾಕ್ಸಿಮಮ್​ ಮಾಸ್​ ಆಗಿಸಿವೆ. ಅದಕ್ಕೆ ಒಪು$್ಪವ ಅಜನೀಷ್​ ಲೋಕನಾಥ್​ ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಪೊಲೀಸ್​ ಠಾಣೆ ಸಿಬ್ಬಂದಿ ಪಾತ್ರಗಳಲ್ಲಿ ಇಳವರಸು, ಉಗ್ರಂ ಮಂಜು ಪಾತ್ರಗಳು ಗಮನ ಸೆಳೆಯುತ್ತವೆ. ಉಳಿದಂತೆ ಸುಕೃತಾ ವಾಗ್ಲೆ, ಸಂಯುಕ್ತಾ, ಗೋವಿಂದೇಗೌಡ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸುನಿಲ್​, ಪ್ರಭಾಕರನ್​, ಪ್ರಮೋದ್​ ಶೆಟ್ಟಿ ವಿಲನ್​ ಪಾತ್ರಗಳಲ್ಲಿ ಮಿಂಚಿದ್ದಾರೆ. ಕಿಚ್ಚ ಸುದೀಪ್​ ಹಲವು ಚಿತ್ರಗಳಲ್ಲಿ ಖಾಕಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, "ಮ್ಯಾಕ್ಸ್​'ನಲ್ಲಿ ಅವರ ಮಾಸ್​ ಅವತಾರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ಬೆಸ್ಟ್​ ಎನ್ನಬಹುದು.