ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಕಬ್ಜ' ಚಿತ್ರದ ಬಳಿಕ ನಿರ್ದೇಶಕ ಆರ್.ಚಂದ್ರು ಆರ್ಸಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಐದು ಸಿನಿಮಾಗಳನ್ನು ಲಾಂಚ್ ಮಾಡಿದ್ದರು. ಅದರಲ್ಲಿ ಮೊದಲನೆಯ "ಫಾದರ್' ಸಿನಿಮಾ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಅದೇ ಖುಷಿಯಲ್ಲಿ ಇತ್ತೀಚೆಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತಾ ಅಯ್ಯಂಗಾರ್, ನಾಗಭೂಷಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ರಾಜ್ ಮೋಹನ್ ನಿರ್ದೇಶನದ ಚಿತ್ರವಿದು.
ನಾಯಕ ಕೃಷ್ಣ, "ತುಂಬ ಸುಂದರವಾದ ವಿಷಯವಿರುವ, ಮನಸ್ಸಿಗೆ ಹತ್ತಿರವಾಗುವ ಸಿನಿಮಾ. ಒಬ್ಬ ನಟನಾಗಿ ಬೆಳೆಯಲು ಈ ಚಿತ್ರ ಕೂಡ ಉತ್ತಮ ವೇದಿಕೆಯಾಗಿದೆ. ಚಿತ್ರ ಪ್ಯಾನ್ ಇಂಡಿಯಾ ಮೂಡಿಬರಲಿದೆ' ಎಂದರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ, ರಿಲೀಸ್ಗೆ ಸಿದ್ಧತೆ ನಡೆಸುವ ಆಲೋಚನೆ ಚಿತ್ರತಂಡದ್ದು.
ಅವತ್ತೇ ಆಗಲಿಲ್ಲ, ಇವತ್ತೇಕೆ ಭಯ?
"ಕಬ್ಜ' ಚಿತ್ರಕ್ಕೆ ಸಿಕ್ಕ ಮಿಶ್ರ ಪ್ರತಿಕ್ರಿಯೆ, ಒಂದೇ ದಿನ ಐದು ಸಿನಿಮಾಗಳನ್ನು ಲಾಂಚ್ ಮಾಡಿದ ಬಳಿಕ ಆರ್. ಚಂದ್ರು ಹೆಚ್ಚು ಟ್ರೋಲ್ ಆಗುತ್ತಿದ್ದರು. ಆ ಬಗ್ಗೆ, "ಮನೆಯಲ್ಲಿ ಮಲಗಿರುವವರ ಬಗ್ಗೆ ಯಾರೂ ಕಮೆಂಟ್ ಮಾಡುವುದಿಲ್ಲ. ಬೆಳೆಯುತ್ತಿರುವವರ ಬಗ್ಗೆ ಕಮೆಂಟ್ ಮಾಡುತ್ತಾರೆ. ಕೇಶಾವರದಿಂದ ಬಂದು 2002ರ ಫೆ. 14 ಮೆಜೆಸ್ಟಿಕ್ ಪ್ಲಾಟ್ಫಾಮ್ರ್ನಲ್ಲಿ ಮಲಗಿದ್ದ ದಿನವೇ ನನಗೆ ಭಯವಿರಲಿಲ್ಲ. ಇನ್ನು ಈಗ 100 ಕೋಟಿ ರೂ. ಗಳಿಕೆಯ ಸಿನಿಮಾ ಮಾಡಿದ್ದೇನೆ. ಐದಲ್ಲ ಐವತ್ತು ಸಿನಿಮಾ ಮಾಡುವಷ್ಟು ಧೈರ್ಯ ಬಂದಿದೆ. ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು. ಇಲ್ಲೇ 300 ಥಿಯೇಟರ್ನಲ್ಲಿ ರಿಲೀಸ್ ಮಾಡುವುದಕ್ಕಿಂತ, ದೇಶಾದ್ಯಂತ 3000 ಥಿಯೇಟರ್ಗಳಲ್ಲಿ ರಿಲೀಸ್ ಮಾಡೋಣ. ಕರ್ನಾಟಕದಲ್ಲಿ ಆಗುವಷ್ಟು ಬಿಜಿನೆಸ್ ಕೊಲ್ಲಿ ರಾಷ್ಟ್ರಗಳಲ್ಲೂ ಆಗುತ್ತೆ. ಆದರೆ, ಯಾರೂ ಆ ಮಾರುಕಟ್ಟೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಹಿಂದಿ, ತೆಲುಗು, ತಮಿಳು ಸೇರಿ ಬೇರೆ ಬೇರೆ ಚಿತ್ರರಂಗಗಳ ನಿರ್ಮಾಪಕರು ನನ್ನ ಜತೆಗಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಗಮನ ಹರಿಸಿದ್ದೇನೆ' ಎಂದು ತಮ್ಮದೇ ರೀತಿಯಲ್ಲಿ ಯುವ ಚಿತ್ರತಂಡಗಳಿಗೆ ಆರ್. ಚಂದ್ರು ಕಿವಿಮಾತು ಹೇಳಿದರು.