ಸಿನಿವಾಣಿ

ಕಿಚ್ಚನ ಬಗ್ಗೆ ಹರಿದಾಡ್ತಿದೆ ಸುಳ್ಳು ಸುದ್ದಿ! ದರ್ಶನ್​ರನ್ನು ಈ ರೀತಿ ಕರೆದೇ ಇಲ್ಲ, ಆದ್ರೆ ಬಿಲ್ಡಪ್​ ಮಾತ್ರ ನಿಂತಿಲ್ಲ

ಬೆಂಗಳೂರು: ನಟ ಸುದೀಪ್​ ಮೊನ್ನೆಯಷ್ಟೇ ಬಿಗ್​ಬಾಸ್​ ಸೀಸನ್​ 10 ಮುಗಿಸಿ "ಮ್ಯಾಕ್ಸ್​" ಶೂಟಿಂಗ್​ ಕಡೆ ಸಂಪೂರ್ಣ ಗಮನ ಹರಿಸಿದ್ದಾರೆ. ಕಿಚ್ಚ ಹೇಳಿದಂತೆ ಚಿತ್ರೀಕರಣ ಮುಗಿಯಲು ಇನ್ನು 25 ದಿನಗಳು ಸಮಯ ಬೇಕಾಗಿದೆ. ಉಳಿದ ಶೂಟಿಂಗ್ ಮುಗಿಸಲು ನಿನ್ನೆ ಬೆಳಿಗ್ಗೆ ತಮಿಳುನಾಡು ಕಡೆ ಹೊರಟ ಕಿಚ್ಚ ಪ್ರಯಾಣದ ನಡುವೆ ಅಭಿಮಾನಿಗಳ ಜತೆ #AskKichcha ಸೆಷನ್ಸ್​ ನಡೆಸಿದರು. ಈ ವೇಳೆ ದರ್ಶನ್​ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕಿಚ್ಚ ನಯವಾಗಿಯೇ ಉತ್ತರಿಸಿದರು. ಇದರ ನಡುವೆ ಕಿಚ್ಚನ ಹೆಸರಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದ್ದು, ಆ ಕುರಿತಾದ ಮಾಹಿತಿ ಇಲ್ಲಿದೆ.

ಅಂದಹಾಗೆ ಸುದೀಪ್​ ಮತ್ತು ದರ್ಶನ್​ ಬಗ್ಗೆ ಹೇಳಬೇಕಿಲ್ಲ. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಕುಚಿಕು ಗೆಳೆಯರಂತಿದ್ದ ಇಬ್ಬರು ಕಾರಣಾಂತರಗಳಿಂದ ದೂರವಾಗಿದ್ದಾರೆ. ಇದರ ಬಗ್ಗೆ ಕೇಳಿದಾಗಲೆಲ್ಲ ಅಭಿಮಾನಿಗಳಲ್ಲಿ ಬೇಸರ ಉಂಟಾಗುತ್ತದೆ. ಆದರೆ, ಇತ್ತೀಚಿಗೆ ಸುದೀಪ್​ ಮತ್ತು ದರ್ಶನ್​ ಮತ್ತೆ ಒಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಲತಾ ಅಂಬರೀಷ್​ ಬರ್ತಡೇಯಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಅಲ್ಲದೆ, ನಾವಿಬ್ಬರು ಜಗಳವಾಡಿಲ್ಲ ಎನ್ನುವ ಮೂಲಕ ಸುದೀಪ್​, ದರ್ಶನ್ ಬಗ್ಗೆ ಮಾತನಾಡಿದ್ದರು. ದರ್ಶನ್​ ಮೇಲೆ ಚಪ್ಪಲಿ ಎಸೆತ ಪ್ರಕರಣದ ವೇಳೆ ಸುದೀಪ್​ ಅದನ್ನು ಖಂಡಿಸಿದ್ದರು. ಇದಕ್ಕೆ ದರ್ಶನ್​ ಕೂಡ ಧನ್ಯವಾದಗಳನ್ನು ಹೇಳಿದ್ದರು. ಸಂದರ್ಶನದಲ್ಲಿಯೂ ದರ್ಶನ್​, ಸುದೀಪ್​ ಹೆಸರು ಹೇಳಿದ್ದಾರೆ. ಇದನೆಲ್ಲ ನೋಡಿದರೆ ಕಾಲಾನಂತರದಲ್ಲಿ ಮನಸ್ತಾಪಗಳು ಕರಗಿ ಇಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಭರವಸೆಯು ಕೂಡ ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿದೆ.

ದರ್ಶನ್​ ಆರಾಧ್ಯ ವ್ಯಕ್ತಿಯೇ?

ಜನವರಿ 29ರಂದು ನಡೆದ #AskKichcha ಸೆಷನ್ಸ್ ವೇಳೆ ದರ್ಶನ್​ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಅಭಿಮಾನಿಯ ಮನವಿಗೆ ಸ್ಪಂದಿಸಿದ ಕಿಚ್ಚ ಸುದೀಪ್​, ದರ್ಶನ್​ ನನ್ನ ಆರಾಧ್ಯ ದೈವ ಎಂದು ಹೇಳಿದ್ದಾರೆ. ಇದು ಸುದೀಪ್​ ಅವರ ಫ್ಯಾನ್​ ಬಾಯ್​ ಮೂಮೆಂಟ್​ ಎಂದು ಎಕ್ಸ್​ ಖಾತೆಯ ಸ್ಕ್ರೀನ್​ ಶಾಟ್​ ಅನ್ನು ವೈರಲ್​ ಮಾಡಿದ್ದಾರೆ. ಆದರೆ, ಇದರ ಹಿಂದಿನ ಅಸಲಿಯತ್ತೇ ಬೇರೆ ಇದೆ. ಏಕೆಂದರೆ, ಸುದೀಪ್​, ದರ್ಶನ್​ ಅವರನ್ನು ಆರಾಧ್ಯ ದೈವ ಎಂದು ಉಲ್ಲೇಖಿಸಿಯೇ ಇಲ್ಲ.

ಆರಾಧ್ಯ ದೈವ ಅಂದಿದ್ದು ವಿಷ್ಣುಗೆ ದಿವಂಗತ ನಟ ಡಾ. ವಿಷ್ಣುವರ್ಧನ್​ ಬಗ್ಗೆ ಹೇಳುವಂತೆ ಅಭಿಮಾನಿಯೊಬ್ಬ ಮನವಿ ಮಾಡಿದ್ದ. ಇದಕ್ಕೆ ಉತ್ತರಿಸಿದ್ದ ಕಿಚ್ಚ, ಮೈ ಐಡಲ್​ ಅಂದರೆ, ನನ್ನ ಆರಾಧ್ಯ ದೈವ ಎಂದು ಉತ್ತರಿಸಿದ್ದರು. ಈ ಎಕ್ಸ್​ ಪೋಸ್ಟ್​ಗೆ ಕೆಲ ಕಿಡಿಗೇಡಿಗಳು ದರ್ಶನ್​ ಅವರ ಫೋಟೋವನ್ನು ಹಾಗೂ ಹೆಸರನ್ನು ಎಡಿಟ್​ ಮಾಡಿ, ಸುದೀಪ್​, ದರ್ಶನ್​ ಅವರನ್ನು ಆರಾಧ್ಯ ದೈವ ಅಂದಿದ್ದಾರೆ ಎಂದು ಬಿಂಬಿಸಿದ್ದಾರೆ. ನಕಲಿ ಸ್ಕ್ರೀನ್​ ಶಾಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೇ ನಿಜ ಎಂದು ನಂಬಿದ್ದಾರೆ. ಆದರೆ, ಇದು ಶುದ್ಧ ಸುಳ್ಳು ಎಂಬುದಕ್ಕೆ ಈ ಕೆಳಗಿನ ಟ್ವೀಟ್​ ಮತ್ತು ಎಡಿಟ್​ ಮಾಡಿದ ಟ್ವೀಟ್​ ನೋಡಿದರೆ ನಿಮಗೆ ಉತ್ತರ ಸಿಗಲಿದೆ.

ದರ್ಶನ್​ ಬಗ್ಗೆ ಅಭಿಮಾನದ ಮಾತು ಇನ್ನು ಸುದೀಪ್​ ಅವರು ಮತ್ತೆ ದರ್ಶನ್​ ಬಗ್ಗೆ ಮಾತನಾಡಿರುವುದು ಸತ್ಯ. ನಿನ್ನೆ ಬೆಳಿಗ್ಗೆ ಅಭಿಮಾನಿಗಳ ಜತೆ ಎಕ್ಸ್​ ಖಾತೆಯಲ್ಲಿ #AskKichcha ಸೆಷನ್ಸ್​ ನಡೆಸುವಾಗ ಅಭಿಮಾನಿಯೊಬ್ಬ ದರ್ಶನ್​ ಬಗ್ಗೆ ಒಂದು ಮಾತು ಹೇಳಿ ಎಂದು ಕೇಳಿದ್ದನು. ಇನ್ನೊಬ್ಬ ಅಭಿಮಾನಿ ಸರ್​ ನಿಮ್ಮದು ಮತ್ತೆ ದರ್ಶನ್ ನಡುವಿನ ಸಮಸ್ಯೆಯನ್ನು ಯಾವಾಗ ಬಗೆಹರಿಸಿಕೊಳ್ತೀರಾ? ಇನ್ನೂ ಎಷ್ಟು ಸಮಯ ತೆಗೆದುಕೊಳ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸುದೀಪ್​, ನಾನು ದರ್ಶನ್​ಗೆ ಯಾವಾಗಲೂ ಒಳ್ಳೆಯದ್ದನ್ನೇ ಬಯಸುತ್ತೇನೆ ಎಂದಿದ್ದರು. ಅಲ್ಲದೆ, ಸಮಸ್ಯೆ ಏನು ಅಂತಾ ನಾವಿಬ್ಬರು ಹುಡುಕುತ್ತಿದ್ದೇವೆ ಎಂದು ಮತ್ತೊಬ್ಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದರು.

ಈ ಹಿಂದೆಯೂ ಅಂದರೆ, ಜ.16ರಂದು ಸುದೀಪ್​ ಅವರು #AskKichcha ಸೆಷನ್ಸ್​ ನಡೆಸಿದ್ದರು. ಆ ಸಮಯದಲ್ಲೂ ಅಭಿಮಾನಿಯೊಬ್ಬ ಕಾಟೇರ ಸಿನಿಮಾವನ್ನು ಯಾವಾಗ ನೋಡ್ತೀರಾ ಎಂದು ಕೇಳಿದ್ದ, ಇದಕ್ಕೆ ಉತ್ತರ ನೀಡಿದ ಕಿಚ್ಚ, ನಾನು ನೋಡಿಲ್ಲ ಎಂದು ಯಾರೊಬ್ಬರು ನಿಮಗೆ ಹೇಳಿಲ್ಲವೇ ಎಂದಿದ್ದರು. ಪದೇಪದೆ ದರ್ಶನ್​ ಕುರಿತು ಎದುರಾಗುವ ಪ್ರಶ್ನೆಗೆ ಸ್ವಲ್ಪವೂ ಬೇಸರಿಸಿಕೊಳ್ಳದೆ, ತುಂಬಾ ನಯವಾಗಿ ದರ್ಶನ್​ ಹೆಸರನ್ನು ಉಲ್ಲೇಖಿಸಿ ಸುದೀಪ್​ ಮಾತನಾಡುತ್ತಾರೆ. ಕಲ್ಮಶವಿಲ್ಲದ ಕಿಚ್ಚನ ಮನಸ್ಸನು ಕಂಡು ಇಂಥಾ ನಟನ ಅಭಿಮಾನಿಯಾಗಿದ್ದಕ್ಕೆ ಸಾರ್ಥಕ ಎಂದು ಹೆಮ್ಮೆ ಪಡುತ್ತಾರೆ. ಆದರೆ, ಇದೇ ಸಮಯದಲ್ಲಿ ಬೇಸರವನ್ನು ಹೊರಹಾಕಿದ್ದಾರೆ.

ಅಭಿಮಾನಿಗಳಿಗೆ ಬೇಸರ

ಯಾವಾಗಲೂ ಸುದೀಪ್​ ಅವರೇ ದರ್ಶನ್​ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ, ಕಿಚ್ಚನ ಬಳಿಯೇ ಪ್ರತಿಯೊಬ್ಬರು ದರ್ಶನ್​ ಬಗ್ಗೆ ಕೇಳುತ್ತಾರೆ. ಆದರೆ, ದರ್ಶನ್​ ಮಾತ್ರ ಕಿಚ್ಚನ ಬಗ್ಗೆ ಒಂದೇ ಒಂದು ಮಾತನಾಡುವುದಿಲ್ಲ. ಕಿಚ್ಚನ ಹೆಸರೇಳಲು ಸಹ ಹಿಂದೇಟು ಹಾಕುತ್ತಾರೆ. ನೀವು ಮತ್ತೆ ದರ್ಶನ್​ ಬಗ್ಗೆ ಮಾತನಾಡಬೇಡಿ ಬಾಸ್​ ಎಂದು ಕಿಚ್ಚನಿಗೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಲವ್​ ಆಗಲಿ, ಫ್ರೆಂಡ್​ಶಿಫ್​ ಆಗಲಿ ಪರಸ್ಪರ ಇರಬೇಕೆ ಹೊರತು ಒನ್​ಸೈಡ್​ ಆಗಬಾರದು ಎಂದು ನೀವೇ ಹೇಳಿದ್ದೀರಾ ಹೀಗಾಗಿ ಪದೇಪದೆ ಮಾತನಾಡಬೇಡಿ ಬಾಸ್​ ಎಂದು ಕೇಳಿಕೊಂಡಿದ್ದಾರೆ. ಸುದೀಪ್​ಗೆ ಹೋಲಿಸಿದರೆ ದರ್ಶನ್​ ಎಲ್ಲಿಯೂ ಬಹಿರಂಗವಾಗಿ ಸುದೀಪ್​ ಬಗ್ಗೆ ಮಾತನಾಡೇ ಇಲ್ಲ. ಇದೇ ಬೇಜಾರು ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ.

ಆದರೆ, ಬಹುತೇಕ ಅಭಿಮಾನಿಗಳು ಇಬ್ಬರು ಒಂದಾಗಲಿ ಎಂದು ಬಯಸಿದ್ದಾರೆ. ಆದಷ್ಟು ಬೇಗ ನಿಮ್ಮ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನೀವಿಬ್ಬರು ಕೂತು ಮಾತನಾಡಿದರೆ ಯಾವ ಸಮಸ್ಯೆಯೂ ಉಳಿಯವುದಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

2017ರ ದರ್ಶನ್​ ಟ್ವೀಟ್​ 2017ರಲ್ಲಿ ದರ್ಶನ್​ ಟ್ವೀಟ್​ ಮಾಡಿ, ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಇಂಡಸ್ಟ್ರಿಗೆ ದುಡಿಯುವ ನಟರಷ್ಟೆ. ಈ ಬಗ್ಗೆ ಯಾವುದೇ ವದಂತಿ ಹರಡಬೇಡಿ. ಇದು ಇಲ್ಲಿಗೆ ಮುಗಿಯಲಿ ಎಂದಿದ್ದರು. ಈ ಒಂದು ಟ್ವೀಟ್​ ಇಡೀ ಕರ್ನಾಟಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಸಿಡಿಲು ಬಡಿದಂತಾಯಿತು. ಅಷ್ಟು ಚೆನ್ನಾಗಿದ್ದ ಇಬ್ಬರ ನಡುವೆ ಏನು ನಡೆಯಿತು ಎಂಬ ಪ್ರಶ್ನೆ ಇಂದಿಗೂ ಅನೇಕರ ಮನದಲ್ಲಿ ಇಂದಿಗೂ ಉಳಿದಿದೆ.