ಬೆಂಗಳೂರು: ನಟ ಕಿಚ್ಚ ಸುದೀಪ್ಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಅವರು ಸ್ಯಾಂಡಲ್ವುಡ್ಗೆ ಪ್ರವೇಶಿಸಿ ಶುಕ್ರವಾರಕ್ಕೆ (ಜ.31) ಭರ್ತಿ 24 ವರ್ಷಗಳಾಗಿದ್ದು ಇದೀಗ 25ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸುನೀಲ್ಕುಮಾರ್ ದೇಸಾಯಿ ನಿರ್ದೇಶನದ ‘ಸ್ಪರ್ಶ’ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡ ಸುದೀಪ್, ಚೊಚ್ಚಲ ಚಿತ್ರದಲ್ಲೇ ಭಾರಿ ಯಶಸ್ಸು ಕಂಡವರು. ಇದಾದ ಬಳಿಕ ಬಿಡುಗಡೆ ಆದ ‘ಹುಚ್ಚ’ ಸಿನಿಮಾ ಕೂಡ ಕಿಚ್ಚನಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅಲ್ಲಿಂದ ಗೆಲುವಿನ ಓಟ ಆರಂಭಿಸಿದ ಸುದೀಪ್ ಇಲ್ಲಿಯವರೆಗೂ ನಿಲ್ಲಿಸಿಲ್ಲ.
ಹುಟ್ಟಿದ್ದು ಶ್ರೀಮಂತ ಕುಟುಂಬವಾದರೂ ಸ್ವಯಂ ಪ್ರತಿಭೆಯಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡವರು ಸುದೀಪ್. ಇಲ್ಲಿಯವರೆಗೆ ಅವರು ಅಭಿನಯಿಸಿದ ಚಿತ್ರಗಳಲ್ಲಿ ಶೇ.80 ಹಿಟ್ಗಳೇ. ‘ಕಿಚ್ಚ’, ‘ಸ್ವಾತಿಮುತ್ತು, ‘ರಂಗ ಎಸ್ಎಸ್ಎಲ್ಸಿ’, ‘ವೀರ ಮದಕರಿ’, ‘ಕೆಂಪೇಗೌಡ’, ‘ರನ್ನ’, ‘ಕೋಟಿಗೊಬ್ಬ 2’, ‘ಹೆಬ್ಬುಲಿ’, ‘ಪೈಲ್ವಾನ್’ ಕಿಚ್ಚನ ಹಿಟ್ಲಿಸ್ಟ್ನಲ್ಲಿರುವ ಕೆಲವು ಪ್ರಮುಖ ಸಿನಿಮಾಗಳು.
ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಲೀಲಾಜಾಲ ಅಭಿನಯದ ಮೂಲಕ ಜನಮನ ಗೆದ್ದ ‘ಅಭಿನಯ ಚಕ್ರವರ್ತಿ’ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಬಾಲಿವುಡ್ ಸೇರಿ ತಮಿಳು, ತೆಲುಗು ಚಿತ್ರರಂಗದಲ್ಲೂ ಜನಪ್ರಿಯ ನಟ. ಅಲ್ಲದೆ, ಸುದೀಪ್ ನಟ ಮಾತ್ರವಲ್ಲ, ಅತ್ಯುತ್ತಮ ನಿರ್ದೇಶಕ, ನಿರೂಪಕ, ಗಾಯಕ ಕೂಡ.
ತೆಲುಗಿನಲ್ಲಿ ‘ಈಗ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದರು. ಬಹುಭಾಷಾ ಚಿತ್ರ ‘ಬಾಹುಬಲಿ’, ಹಿಂದಿಯ ‘ದಬಂಗ್ 3’ ಚಿತ್ರದ ಸಕ್ಸಸ್ನಲ್ಲೂ ಸುದೀಪ್ ಪಾಲುದಾರರು. ಅಷ್ಟೇ ಅಲ್ಲ, ಸುದೀಪ್ ನಟನೆಗೆ ಹಾಲಿವುಡ್ ಮಂದಿ ಕೂಡ ಮನಸೋತಿದ್ದಾರೆ. ಹೀಗಾಗಿ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಅರಸಿ ಬಂದಿದೆ. ಸುದೀಪ್ 24 ವರ್ಷಗಳ ಸಿನಿಜರ್ನಿ ಪೂರೈಸಿದ್ದಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.