ಸಿನಿವಾಣಿ

ಜಾನಿ ಜಾನಿ ನೋ ಮೇಡಂ! ನೃತ್ಯನಿರ್ದೇಶಕನ ಹೆಸರು ಕೈಬಿಟ್ಟ ನಟಿ ಕಿಯಾರಾ ಅಡ್ವಾನಿ

ಕನ್ನಡದಲ್ಲೂ ಕೆಲ ಸಿನಿಮಾ ಹಾಡುಗಳಿಗೆ ನೃತ್ಯನಿರ್ದೇಶನ ಮಾಡಿದ್ದ ತೆಲುಗಿನ ಖ್ಯಾತ ನೃತ್ಯನಿರ್ದೇಶಕ ಜಾನಿ ಮಾಸ್ಟರ್​ ಅವರನ್ನು ಕಳೆದ ಸೆಪ್ಟೆಂಬರ್​ನಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಅವರ ತಂಡದಲ್ಲಿದ್ದ ಯುವತಿಯೊಬ್ಬರು, ಕೆಲ ವರ್ಷಗಳಿಂದ ನಿರಂತರವಾಗಿ ಜಾನಿ ಮಾಸ್ಟರ್​ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಜಾನ ಒಂದು ತಿಂಗಳ ಜೈಲುವಾಸ ಬಳಿಕ ಅಕ್ಟೋಬರ್​ನಲ್ಲಿ ಬೇಲ್​ ಪಡೆದು ಬಿಡುಗಡೆಯಾಗಿದ್ದರು. ಅದರ ಬೆನ್ನಲ್ಲೇ ತೆಲುಗು ಸಿನಿಮಾ ನೃತ್ಯನಿರ್ದೇಶಕರ ಸಂಘದ ಅಧ್ಯಕ್ಷ ಸ್ಥಾನದಿಂದ ಜಾನಿಯನ್ನು ವಜಾ ಮಾಡಲಾಗಿತ್ತು. ಜತೆಗೆ ಅವರಿಗೆ ಸಂದಿಂದ ಗೇಟ್​ಪಾಸ್​ ಕೂಡ ನೀಡಲಾಗಿತ್ತು.

ಆದರೆ, ಅದಕ್ಕೂ ಮೊದಲೇ ಜಾನಿ ಕೆಲ ಸಿನಿಮಾಗಳಿಗೆ ನೃತ್ಯನಿರ್ದೇಶನ ಮಾಡಿದ್ದರು. ಅದರಲ್ಲಿ ರಾಮಚರಣ್​ ತೇಜಾ, ಕಿಯಾರಾ ಅಡ್ವಾನಿ ನಟಿಸಿರುವ, ಶಂಕರ್​ ನಿರ್ದೇಶನದ ಪ್ಯಾನ್​ ಇಂಡಿಯಾ "ಗೇಮ್​ ಚೇಂಜರ್​' ಚಿತ್ರದ "ಧೋಪ್​' ಹಾಡು ಕೂಡ ಒಂದು. ಕಳೆದ ಭಾನುವಾರ (ಡಿ. 22) ಸಾಂಗ್​ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಹಾಡನ್ನು 13 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ತಮ್ಮ ಸಿದ್ಧತೆಯ ಬಗ್ಗೆ ಕಿಯಾರಾ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಜಾನಿ ಮಾಸ್ಟರ್​ ಬಗ್ಗೆಯೂ ಹೇಳಿಕೊಂಡಿದ್ದರು. ಜಾಲತಾಣದಲ್ಲಿ ಕಿಯಾರಾ, ಜಾನಿ ಬಗ್ಗೆ ಮಾತನಾಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು.

ತಕ್ಷಣ ಎಚ್ಚೆತ್ತುಕೊಂಡ ಕಿಯಾರಾ ಯಾವುದೇ ಸ್ಪಷ್ಟನೆ ನೀಡದೇ ಜಾನಿ ಮಾಸ್ಟರ್​ ಕುರಿತು ಬರೆದಿದ್ದನ್ನು ತಮ್ಮ ಜಾಲತಾಣದ ಪೋಸ್ಟ್​ನಿಂದ ತೆಗೆದಿದ್ದಾರೆ. ಸದ್ಯ "ಧೋಪ್​' ಹಾಡಿಗಿಂತಲೂ ಕಿಯಾರಾ ಅವರ ಪೋಸ್ಟ್​ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಂದಹಾಗೆ, "ಗೇಮ್​ಚೇಂಜರ್​' 2025ರ ಜ. 10ರಂದು ತೆರೆಗೆ ಬರಲಿದೆ.