ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ರಾಮನವಮಿಯಂದು ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಹಾಡು ಬಿಡುಗಡೆಯಾಗಿತ್ತು. ಸಾಕಷ್ಟು ಚರ್ಚೆಗೊಳಗಾದ ಈ ಹಾಡು ಇದೀಗ ಹೊಸ ದಾಖಲೆ ಬರೆದಿದೆ. ಕೆಲವೇ ದಿನಗಳ ಅಂತರದಲ್ಲಿ 13.5 ಮಿಲಿಯನ್ ಹಿಟ್ಸ್ ಪಡೆದಿದೆ.
ಹೌದು, ಲಾಕ್‌ಡೌನ್ ಸಂದರ್ಭದಲ್ಲಿ ಬಿಡುಗಡೆಯಾದ ‘ಖರಾಬು’ ಹಾಡಿಗೆ ಯೂಟ್ಯೂಬ್‌ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಈ ಹಾಡಿಗೆ 13.5 ಮಿಲಿಯನ್ ಹಿಟ್ಸ್ ಸಿಕ್ಕಿದ್ದು, ಈ ಸಂತೋಷದಲ್ಲೇ, ಆನಂದ್ ಆಡಿಯೋದವರು ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ‘ಪೊಗರು’ ಚಿತ್ರ ಬಿಡುಗಡೆಯಾಗಬೇಕಿತ್ತು. ಒಂದು ಹಾಡು ಬಿಟ್ಟರೆ, ಮಿಕ್ಕಂತೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಇನ್ನೇನು ಚಿತ್ರತಂಡದವರು ಕಳೆದ ತಿಂಗಳು ಹೈದರಾಬಾದ್‌ಗೆ ಚಿತ್ರೀಕರಣಕ್ಕೆಂದು ಹೋಗಬೇಕು ಎನ್ನುವಷ್ಟರಲ್ಲೇ ಲಾಕ್‌ಡೌನ್ ಘೋಷಣೆಯಾಯಿತು. ಈಗ ಈ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಮಿಕ್ಕಂತೆ ಎಲ್ಲವೂ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಕ್ತಾಯದ ಹಂತಕ್ಕೆ ಬಂದು ಬಿಟ್ಟಿದೆ.
‘ಪೊಗರು’ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಂದಕಿಶೋರ್ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.