ಸಿನಿವಾಣಿ

ಖಾಕಿ ಖದರ್ ರಜನಿ ದರ್ಬಾರ್

vijayavani

ಬೆಂಗಳೂರು: ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಪುತ್ರಶೋಕ ಮತ್ತು ಪುತ್ರಿಶೋಕದ ‘ದರ್ಬಾರ್’. ಒಬ್ಬ ಇಂಟರ್​ನ್ಯಾಷನಲ್ ಡ್ರಗ್ ಡೀಲಿಂಗ್ ಮಾಫಿಯಾದ ಡಾನ್ (ಸುನೀಲ್ ಶೆಟ್ಟಿ) ಪುತ್ರನನ್ನು ಪೊಲೀಸ್ ಕಮಿಷನರ್ ಸಾಯಿಸುತ್ತಾನೆ. ಅದಕ್ಕೆ ಪ್ರತೀಕಾರವಾಗಿ ಆತ ಪೊಲೀಸ್ ಕಮಿಷನರ್ (ರಜನಿಕಾಂತ್) ಹಾಗೂ ಆತನ ಪುತ್ರಿ (ನಿವೇದಾ ಥಾಮಸ್) ಇಬ್ಬರನ್ನೂ ಒಟ್ಟಿಗೇ ಸಾಯಿಸಲು ಪ್ರಯತ್ನಿಸುತ್ತಾನೆ. ಅದೃಷ್ಟವಶಾತ್ ಕಮಿಷನರ್ ಬದುಕುಳಿಯುತ್ತಾನೆ. ಆದರೆ, ಪುತ್ರಿ ಸಾಯುತ್ತಾಳೆ. ಕಮಿಷನರ್​ನನ್ನು ಇನ್ನು ಸಾಯಿಸುವ ಅಗತ್ಯವಿಲ್ಲ, ಆತ ಅದೇ ಶೋಕದಲ್ಲಿ ನರಳಿ ಸಾಯುತ್ತಾನೆ ಎಂದು ಡಾನ್ ನಿರ್ಧರಿಸುತ್ತಾನೆ.

ಆದರೆ, ಸಾಯುವ ಮುನ್ನ ಪುತ್ರಿ ಹೇಳಿದ್ದ ಮಾತುಗಳು ‘ಆ ಡಾನ್​ನನ್ನು ಉಳಿಸಲೇಬಾರದು’ ಎಂಬ ಆವೇಶವನ್ನು ಕಮಿಷನರ್​ನಲ್ಲಿ ಮೂಡಿಸುತ್ತದೆ. ಮಗಳ ಮಾತಿನ ‘ಶಾಕ್’ ಪುತ್ರಿಯನ್ನು ಕಳೆದುಕೊಂಡ ಶೋಕದಿಂದ ಕಮಿಷನರ್​ನನ್ನು ಹೊರತರುತ್ತದೆ. ‘ಅರೇ.. ಸತ್ತ ಪುತ್ರಿ ಮಾತನಾಡುವುದಾದರೂ ಹೇಗೆ?’ ಎಂಬ ಪ್ರಶ್ನೆ ಈಗ ಮೂಡುವುದು ಸಹಜ. ಇದಕ್ಕೆ ‘ದರ್ಬಾರ್’ನನ್ನು ಚಿತ್ರಮಂದಿರಲ್ಲಿ ಕಣ್ತುಂಬಿಸಿಕೊಳ್ಳುವುದೊಂದೇ ಉತ್ತರ. ಇದನ್ನು ಚಿತ್ರದಲ್ಲಿನ ‘ದ ಬೆಸ್ಟ್ ಸೀನ್’ ಎಂದರೂ ಅತಿಶಯೋಕ್ತಿ ಅಲ್ಲ. ಅಸಲಿ ದರ್ಬಾರ್ ಶುರುವಾಗುವುದೇ ಇಲ್ಲಿಂದ.

ಈ ಶೋಕಗಳ ದರ್ಬಾರ್​ನಲ್ಲೂ ಮಾಸ್ ಮನರಂಜನೆ ಇದೆ, ಕ್ಲಾಸ್ ಭಾವನೆ ಇದೆ. ಡ್ರಗ್ ಮಾಫಿಯಾ ಹೇಗೆ ಹದಿಹರೆಯದವರನ್ನು ದಾರಿ ತಪ್ಪಿಸುತ್ತದೆ, ಅದನ್ನು ನಿಯಂತ್ರಿಸಲು ಹೋದಾಗ ಹೇಗೆ ವ್ಯವಸ್ಥೆ ಹದಗೆಡುತ್ತದೆ ಎಂಬುದನ್ನೆಲ್ಲ ನಿರ್ದೇಶಕರು ಇಲ್ಲಿ ಅಚ್ಚುಕಟ್ಟಾಗಿ ಕಥೆ ಹೆಣೆದಿದ್ದಾರೆ. ಚಿತ್ರ ಆರಂಭವಾಗುವುದೇ ಈ ಡ್ರಗ್ ಮಾಫಿಯಾ ಸಂಬಂಧಿತ ಎನ್​ಕೌಂಟರ್​ಗಳಿಂದ. ಈ ಎನ್​ಕೌಂಟರ್​ಗಳಿಗೆ ಪ್ರತಿಯಾಗಿ ಡ್ರಗ್ ಮಾಫಿಯಾ ಹೂಡುವ ತಂತ್ರಗಳಿಗೆ ಕಮಿಷನರ್ ಮಾಡುವ ಕೌಂಟರ್ ತಂತ್ರಗಳು ಚಿತ್ರದಲ್ಲಿ ಟ್ವಿಸ್ಟ್ ಗಳನ್ನು ನೀಡುತ್ತ ಹೋಗುತ್ತವೆ. ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲಿರುವಂತೆ ಇಲ್ಲಿ ಹದಿಹರೆಯದ ಪ್ರೀತಿ-ಪ್ರೇಮಗಳ ದೃಶ್ಯಗಳಿಗೆ ಆಸ್ಪದವೇ ಇಲ್ಲ. ರಜನಿಯೇ ಇಲ್ಲಿ ಹದಿಹರೆಯದವರಂತೆ ಪ್ರೇಮನಿವೇದನೆ ಮಾಡಿಕೊಳ್ಳುವ ಸನ್ನಿವೇಶಗಳು ಇವೆಯಾದರೂ, ತಂದೆ-ಮಗಳ ನಡುವಿನ ಉತ್ಕಟ ಪ್ರೀತಿಯ ದೃಶ್ಯಗಳೇ ಮನಸ್ಸಿನಲ್ಲಿ ಉಳಿಯುವಂಥವು. ನಯನತಾರಾ ಸೌಂದರ್ಯ ಕಣ್ಸೆಳೆದರೂ ರಜನಿಕಾಂತ್-ನಿವೇದಾ ಥಾಮಸ್ ನಡುವಿನ ಬಾಂಧವ್ಯದ ಕ್ಷಣಗಳು ಮನಸೆಳೆಯುತ್ತವೆ, ಹೃದಯಕ್ಕಿಳಿಯುತ್ತವೆ. ಮಧ್ಯೆ ಮಧ್ಯೆ ಯೋಗಿ ಬಾಬುವಿನ ಕಾಮಿಡಿ ನಗು ಚೆಲ್ಲುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾದಲ್ಲಿ ರಜನಿಕಾಂತ್ ಪೊಲೀಸ್ ಕಮಿಷನರ್ ಆದಿತ್ಯ ಅರುಣಾಚಲಂ ಆಗಿ ಖಾಕಿ ಖದರ್ ತೋರಿಸಿ, ದರ್ಬಾರ್ ನಡೆಸಿದ್ದಾರೆ. ಖಡಕ್ ಲುಕ್​ನಲ್ಲಿ ತಮ್ಮ ಎಂದಿನ ಸ್ಟೈಲಿಶ್ ನಡೆ-ನುಡಿಯ ಝುಲಕ್ ಕೂಡ ತೋರಿದ್ದಾರೆ.

ಕೊನೆಯಲ್ಲಿ ಆ ಡ್ರಗ್ ಮಾಫಿಯಾದ ಡಾನ್ ಹರಿ ಚೋಪ್ರಾನನ್ನು ಕೊಲ್ಲುವಾಗ, ‘ನಿನ್ನ ಮಗನನ್ನು ಕೊಂದೆ ಅಂತ ನೀನು ನನ್ನ ಮಗಳನ್ನು ಕೊಂದೆ. ಆದರೆ ನನ್ನ ಮಗಳು ಒಳ್ಳೆಯವಳಾಗಿದ್ದಳು..’ ಎನ್ನುತ್ತಾನೆ ಆದಿತ್ಯ. ಅಲ್ಲಿಗೆ ಚಿತ್ರ ಮುಗಿದರೂ ಆ ಒಳ್ಳೇ ಮಗಳು ಮತ್ತು ಆಕೆಯ ತಂದೆ ನಡುವಿನ ಮಧುರ ಬಾಂಧವ್ಯದ ದೃಶ್ಯಗಳು ಪ್ರೇಕ್ಷಕರ ಚಿತ್ತದಲ್ಲಿ ಉಳಿದುಬಿಡುತ್ತವೆ.

ರವಿಕಾಂತ ಕುಂದಾಪುರ