ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದುನಿಯಾ ಸೂರಿ ನಿರ್ದೇಶನದ "ಕೆಂಡಸಂಪಿಗೆ' ಮತ್ತು ಹರಿ ಸಂತು ಆ್ಯಕ್ಷನ್-ಕಟ್ನಲ್ಲಿ "ಕಾಲೇಜ್ ಕುಮಾರ' ಚಿತ್ರಗಳಲ್ಲಿ ನಟಿಸಿದ್ದ ವಿಕ್ಕಿ ವರುಣ್ ಇದೀಗ "ಕಾಲಾಪತ್ಥರ್' ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ವಿಶೇಷ ಅಂದರೆ ಚೊಚ್ಚಲ ಬಾರಿಗೆ ನಿರ್ದೇಶನದ ಜತೆಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ನಾಳೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಅದೇ ಖುಷಿಯಲ್ಲಿ "ಕಾಲಾಪತ್ಥರ್' ಬಗ್ಗೆ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ ವಿಕ್ಕಿ ವರುಣ್.
ಕಪ್ಪು ಕಲ್ಲಿನ ಕಥೆ
"ಕಾಲಾಪತ್ಥರ್' ಪ್ರಾರಂಭಿಸಿದ ಬಗ್ಗೆ ವಿಕ್ಕಿ, ""ಕಾಲೇಜ್ ಕುಮಾರ' ಸಮಯದಲ್ಲಿ ಸತ್ಯಪ್ರಕಾಶ್ "ಕಾಲಾಪತ್ಥರ್' ಕಥೆ ಹೇಳಿದರು. ಆದರೆ ಕರೊನಾದಿಂದ ಸಿನಿಮಾ ಪ್ರಾರಂಭಿಸುವುದು ತಡವಾಯಿತು. ನಾನು ನಿರ್ದೇಶಕನಾಗಲೆಂದೇ ಚಿತ್ರರಂಗಕ್ಕೆ ಬಂದವನು. 2009ರಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲೇ ಕೆಲಸ ಮಾಡುತ್ತಿದ್ದೆ. ನಂತರ ನಾಯಕನಾಗಿ "ಕೆಂಡಸಂಪಿಗೆ', "ಕಾಲೇಜ್ ಕುಮಾರ' ಚಿತ್ರಗಳಲ್ಲಿ ನಟಿಸಿದ ಅನುಭವವಿತ್ತು. ಹೀಗಾಗಿ ನಾನೇ ಏಕೆ "ಕಾಲಾಪತ್ಥರ್' ನಿರ್ದೇಶಿಸಬಾರದು ಅಂತನ್ನಿಸಿತು. ಎರಡೂ ವಿಭಾಗದಲ್ಲಿ ಒಟ್ಟಿಗೆ ಕೆಲಸ ಮಾಡಿದ ಹೊಸ ಅನುಭವ ಈ ಚಿತ್ರ. ಒಂದು ಕಪು$್ಪ ಕಲ್ಲಿನ ಕಥೆಯಿದು. ಶಂಕರ ಎಂಬ ಬಿಎಸ್ಎಫ್ ಯೋಧನ ವೈಯಕ್ತಿಕ ಜೀವನದ ಕಥೆ. ಯಾವ ವ್ಯಕ್ತಿ, ಜಾಗ, ಸಿನಿಮಾಗೆ ಸಂಬಂಧಪಟ್ಟ ಚಿತ್ರವಲ್ಲ. ಕಾಲ್ಪನಿಕ ಕಥೆ' ಎಂದು ಮಾಹಿತಿ ನೀಡುತ್ತಾರೆ.
ಸ್ವಿಚ್ ಆನ್ ಮತ್ತು ಸ್ವಿಚ್ ಆನ್ ಸವಾಲು
ನಿರ್ದೇಶನ ಮತ್ತು ನಟನೆ ಎರಡೂ ವಿಭಾಗಗಳಲ್ಲಿ ಕೆಲಸ ಮಾಡಿರುವ ವಿಕ್ಕಿ ವರುಣ್, "ಎರಡೂ ಜವಾಬ್ದಾರಿಯನ್ನು ಒಟ್ಟಿಗೆ ನಿಭಾಯಿಸುವುದು ಸವಾಲಿನ ಕೆಲಸ. ಯಾರಿರಲಿ, ಯಾರು ಇಲ್ಲದಿರಲಿ, ಯಾರಾದರು ತಡವಾಗಿ ಬರಲಿ, ಆದರೆ, ನಾನಂತೂ ಸೆಟ್ನಲ್ಲಿ ಯಾವುದೇ ಕುಂದು ಕೊರತೆಯಾಗದಂತೆ ನೋಡಿಕೊಳ್ಳಬೇಕಿತ್ತು. ಜತೆಗೆ ನಿರ್ದೇಶಕನಾಗಿ ನಂತರ ನಟನಾಗಿ ಸ್ವಿಚ್ ಆನ್ ಸ್ವಿಚ್ ಆ್ ಆಗುವುದು ಸವಾಲಾಗಿತ್ತು. ಒಂದೊಳ್ಳೆ ತಂಡ ಜತೆಗಿದ್ದ ಕಾರಣ ನನಗೆ ಎರಡೂ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಾಯಿತು' ಎನ್ನುತ್ತಾರೆ.
ಬಿಗ್ಗೆಸ್ಟ್ ಸರ್ಪ್ರೈಸ್ ಇದೆ!
"ಕಾಲಾಪತ್ಥರ್' ಸದ್ಯ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದ್ದು, ಕನ್ನಡದ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು, ಮುಂದೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಆಲೋಚನೆಯಿದೆ. "ಚಿತ್ರದಲ್ಲಿ ಮೂರು ಫೈಟ್ಸ್ ಮತ್ತು ಐದು ಹಾಡುಗಳಿದ್ದು, ಒಂದು ಬಿಗ್ಗೆಸ್ಟ್ ಸರ್ಪ್ರೈಸ್ ಇದೆ, ಅದನ್ನು ಥಿಯೇಟರ್ನಲ್ಲಿ ನೋಡಿದರೇ ಚೆಂದ' ಎನ್ನುತ್ತಾರೆ ವಿಕ್ಕಿ ವರುಣ್. ಹಾಗೇ "ಹಿಂದಿ ಸಿನಿಮಾ "ಕಾಲಾಪತ್ಥರ್'ಗೂ, ನೇಪಾಳದ ಕಾಲಾಪತ್ಥರ್ ಶಿಖರಕ್ಕೂ, ಅಂಡಮಾನ್ನ ಬೀಚ್ಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನಾವೇನು ಅಂದುಕೊಂಡಿದ್ದೆವೋ ಅದೇ ರೀತಿ ಚಿತ್ರ ಮೂಡಿಬಂದಿದೆ. ಎರಡು ತಾಸಿನ ಒಳಗೆ ಕಥೆ ಹೇಳಬೇಕು ಅಂತ ಚಿತ್ರಕಥೆ ಮಾಡುವ ಸಂದರ್ಭದಲ್ಲೇ ನಿರ್ಧರಿಸಿದ್ದೆ. ಅದಕ್ಕೆ ತಕ್ಕಂತೆ ಸಿನಿಮಾ 113 ನಿಮಿಷವಿದೆ. ಕನ್ನಡಿಗರು ಒಂದೊಳ್ಳೆ ಕನ್ನಡ ಚಿತ್ರದ ಕೈಹಿಡಿಯುತ್ತಾರೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ.