ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಚಿತ್ರ: ಕೇದಾರನಾಥ ಕುರಿ ಫಾರಂ
ನಿರ್ದೇಶನ: ಶೀನು ಸಾಗರ್
ನಿರ್ಮಾಣ: ಕೆಎಂ ನಟರಾಜ್
ತಾರಾಗಣ: ಮಡೆನೂರು ಮನು, ಶಿವಾನಿ ಅಮರ್, ಟೆನ್ನಿಸ್ ಕೃಷ್ಣ, ಕರಿ ಸುಬ್ಬು, ಸಿದ್ದು, ಸುನಂದ, ನಿಂಗರಾಜ್, ಮುತ್ತುರಾಜ್ ಮುಂತಾದವರು
ಹೊಸ ಪ್ರತಿಭೆಗಳು ಹೊಸ ರೀತಿಯ ಕಥೆಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಲೇ ಇದೆ. ಕೆಲವು ಸಕ್ಸಸ್ ಆದರೆ, ಕೆಲವು ಇಲ್ಲ. ಹಾಗಂತ ಪ್ರಯತ್ನಗಳಂತೂ ನಿಂತಿಲ್ಲ. ಇಂತಹ ಭಿನ್ನ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶೀನು ಸಾಗರ್. ಹೊಸ ಪ್ರತಿಭೆಗಳ, ಹಳೆಯ ದಿಗ್ಗಜರ ಸಮಾಗಮವಾಗಿರುವ ’ಕೇದಾರನಾಥ ಕುರಿ ಫಾರಂ‘ ಹಳ್ಳಿ ಸೊಗಡಿನ ಕಥೆ. ಇಲ್ಲಿ ಪಾತ್ರಗಳಷ್ಟೇ ಸಂಭಾಷಣೆಯೂ ಮುಖ್ಯ.
ಕೇದಾರನಾಥ (ಕರಿಸುಬ್ಬು) ಒಂದು ಕುರಿ ಫಾರಂ ನಡೆಸುತ್ತಿರುತ್ತಾರೆ. ಅಲ್ಲಿ ಕುರಿ ಕಾಯುವ ಹುಡುಗನೇ ಮಂಜ (ಮನು). ಬೆಳಗ್ಗೆಯಿಂದ ಸಂಜೆಯವರೆಗೆ ಕುರಿ ಕಾಯುವುದು, ನಂತರ ಗೆಳೆಯರ ಜತೆ ಕೂತು ಕುಡಿಯುವುದು ಆತನ ದಿನಚರಿ. ಈ ಮಂಜನ ಬಾಳಿಗೆ ವಾಸಂತಿ (ಶಿವಾನಿ) ಎಂಟ್ರಿಯಾಗುತ್ತಾಳೆ. ಅವರಿಬ್ಬರ ನಡುವೆ ಪ್ರೀತಿ, ಪ್ರೇಮ ಚಿಗುರುತ್ತದೆ. ಅದೇ ಸಮಯದಲ್ಲಿ ನಾಯಕಿಯ ಜೀವನದಲ್ಲಿ ದುರ್ಘಟನೆಯೊಂದು ನಡೆದು ಹೋಗುತ್ತದೆ. ಮುಂದೆ? ನಾಯಕ, ನಾಯಕಿ ಒಂದಾಗುತ್ತಾರಾ? ನಾಯಕಿಯ ಜೀವನದಲ್ಲಿ ನಡೆದ ಘಟನೆಯೇನು? ಕುರಿ ಕಾಯುವ ಹುಡುಗನ ಕಥೆಯೇನಾಗುತ್ತೆ? ’ಕೇದಾರನಾಥ ಕುರಿ ಫಾರಂ‘ ನೋಡಿ.
ನಿರ್ದೇಶಕ ಶೀನು ಸಾಗರ್ ಹಳ್ಳಿ ಸೊಗಡನ್ನು ಅಚ್ಚುಕಟ್ಟಾಗಿ ಕಟ್ಟುಕೊಟ್ಟಿದ್ದಾರೆ. ಪ್ರೀತಿ, ಪ್ರೇಮ ಮಾತ್ರವಲ್ಲದೇ ಹಾಸ್ಯ, ಗೆಳೆತನ, ಸಂಬಂಧ, ಅದರ ನಡುವೆ ಸೇಡಿನ ಕಿಚ್ಚು, ಹೋರಾಟ... ಹೀಗೆ ಹಲವು ಅಂಶಗಳು ಚಿತ್ರದಲ್ಲಿವೆ. ಹಳೆಯ ಕಥೆ ಅಂತನ್ನಿಸಿದರೂ ಅದನ್ನು ಶೀನು ಸಾಗರ್ ನಿರೂಪಿಸಿರುವ ಶೈಲಿ ಹೊಸತನವನ್ನು ನೀಡಿದೆ. ಕೆಲವೆಡೆ ನಿಧಾನ ಎನಿಸಿದರೂ, ದ್ವಿತೀಯಾರ್ಧದಲ್ಲಿ ನಡೆಯುವ ಒಂದು ಟ್ವಿಸ್ಟ್ ಕಥೆಯ ದಿಕ್ಕನ್ನೇ ಬದಲಿಸುತ್ತದೆ. ಜತೆಗೆ ರಾಜೇಶ್ ಸಾಲುಂಡಿ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಹೀಗಾಗಿ 118 ನಿಮಿಷಗಳ ಸಿನಿಮಾ ಸರಳವಾಗಿ ನೋಡಿಸಿಕೊಂಡು ಹೋಗುತ್ತದೆ. ಸಿನಿಮಾಗಳಲ್ಲಿ ಡೈಲಾಗ್ಸ್ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದು. ಮಡೆನೂರ್ ಮನು, ಶಿವಾನಿ, ಟೆನ್ನಿಸ್ ಕೃಷ್ಣ, ಕರಿಸುಬ್ಬು, ಸುನಂದ, ಮುತ್ತುರಾಜ್, ನಿಂಗರಾಜ್, ಸಿದ್ದು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾ ಒಮ್ಮೆ ನೋಡಲಡ್ಡಿಯಿಲ್ಲ.