ಸಿನಿವಾಣಿ

ರಾಮ ಯೋಗಿಗೆ ಕಾವ್ಯಾ ರಾವಣ

Raichur

ಬೆಂಗಳೂರು: ರಾಮಾಯಣ ಮತ್ತು ಮಹಾಭಾರತ ಆಧರಿಸಿ ಲಕ್ಷಾಂತರ ಕಥೆಗಳು ಹೊರಹೊಮ್ಮಿವೆ. ಎಷ್ಟೋ ಸಿನಿಮಾಗಳಿಗೆ ಕಥೆ ಹುಟ್ಟುವುದೇ ಆ ಮಹಾಕಾವ್ಯಗಳಿಂದ. ಇದೀಗ ಚಂದನವನದಲ್ಲಿ ಮಾಡರ್ನ್ ರಾಮಾಯಣದ ಕಥೆ ಹೇಳಲು ಬರುತ್ತಿದ್ದಾರೆ ಲೂಸ್ ಮಾದ ಯೋಗಿ. ಇಲ್ಲಿ ಯೋಗಿ ಆಧುನಿಕ ರಾಮನಾದರೆ, ರಾವಣನ ಪಾತ್ರ ಮಾಡಿರುವುದು ನಟಿ ಕಾವ್ಯಾ ಶೆಟ್ಟಿ.

ಮಂಡ್ಯ ಭಾಗದಲ್ಲಿ ಕೆಲ ದಶಕಗಳ ಹಿಂದೆ ನಡೆದ ಘಟನೆಯೊಂದನ್ನೇ ಪ್ರಧಾನವಾಗಿಟ್ಟುಕೊಂಡು ‘ಲಂಕೆ’ ಸಿನಿಮಾ ಮಾಡಲಾಗಿದೆ. ದ್ವೇಷವನ್ನೂ, ಪ್ರೀತಿಯನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದ ವ್ಯಕ್ತಿ ರಾವಣ. ರಾವಣ ಎಂದಾಗ ಆ ಪಾತ್ರವನ್ನು ಪುರುಷರು ಮಾಡುವುದು ಸಹಜ. ಆದರೆ, ರಾವಣನ ಗುಣವಿಟ್ಟುಕೊಂಡಿರುವ ವ್ಯಕ್ತಿಯ ಪಾತ್ರವನ್ನು ಈ ಆಧುನಿಕ ರಾಮಾಯಣದಲ್ಲಿ ಕಾವ್ಯಾ ನಿಭಾಯಿಸಿದ್ದಾರೆ.

ಪಾತ್ರದ ಬಗ್ಗೆ ಮಾತನಾಡುವ ಕಾವ್ಯಾ ಶೆಟ್ಟಿ, ‘ಈ ಸಿನಿಮಾದಲ್ಲಿ ಮೊದಲಿಗೆ ಸಿಕ್ಕ ಪಾತ್ರವೇ ಬೇರೆ, ಆಮೇಲೆ ಸಿಕ್ಕ ಪಾತ್ರವೇ ಬೇರೆ. ಈ ಚಿತ್ರದಲ್ಲಿ ನನ್ನದು ನೆಗೆಟಿವ್ ಪಾತ್ರ. ವಿಲನ್ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ‘ಲಂಕೆ’ ಸಿನಿಮಾ ಶೀರ್ಷಿಕೆಗೆ ಹೋಲಿಕೆ ಮಾಡಿದರೆ, ಯೋಗಿ ಅವರದ್ದು ರಾಮನ ಪಾತ್ರವಾದರೆ, ನನ್ನದಿಲ್ಲಿ ರಾವಣನ ಪಾತ್ರ. ಈ ರೀತಿಯ ಪಾತ್ರ ಮಾಡಿದ್ದು ಇದೇ ಮೊದಲು’ ಎನ್ನುತ್ತಾರೆ ಕಾವ್ಯಾ. ರಾಮ್ ಪ್ರಸಾದ್ ನಿರ್ದೇಶನದ ಈ ಸಿನಿಮಾ ಮಾರ್ಚ್​ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನುಳಿದಂತೆ ಸಂಚಾರಿ ವಿಜಯ್, ಕೃಷಿ ತಾಪಂಡ, ಎಸ್ತರ್ ನರೋನಾ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ.