ಸನ್​ ಗ್ರೂಪ್​ ಕಂಪನಿಯ ಉದ್ಯೋಗಿಗಳಿಗೆ ಕಾವ್ಯ ಮಾರನ್​ ದುಬಾರಿ ಗಿಫ್ಟ್​! ಓಪನ್​ ಮಾಡಿದವರಿಗೆ ಕಾದಿತ್ತು ಬಿಗ್ ಸರ್ಪ್ರೈಸ್​​... Kavya Maran 
ಸಿನಿವಾಣಿ

ಸನ್​ ಗ್ರೂಪ್​ ಕಂಪನಿಯ ಉದ್ಯೋಗಿಗಳಿಗೆ ಕಾವ್ಯ ಮಾರನ್​ ದುಬಾರಿ ಗಿಫ್ಟ್​! ಓಪನ್​ ಮಾಡಿದವರಿಗೆ ಕಾದಿತ್ತು ಬಿಗ್ ಸರ್ಪ್ರೈಸ್​​... Kavya Maran

ಚೆನ್ನೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಮತ್ತು ದಕ್ಷಿಣ ಭಾರತ ಸಿನಿರಂಗದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ರವಿಚಂದರ್ (Kavya Maran-Anirudh Ravichander) ಜೋಡಿಯು ಇತ್ತೀಚೆಗಷ್ಟೇ ಗ್ರೀಸ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆಯಾದ ಖುಷಿಯಲ್ಲೇ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಕಾವ್ಯ ನೀಡಿರುವ ವಿಶೇಷ ಉಡುಗೊರೆ ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.

ತಮ್ಮ ತಂದೆ ಒಡೆತನದ ಸನ್​ ಗ್ರೂಪ್ ಸಂಸ್ಥೆಯ ಉದ್ಯೋಗಿಗಳಿಗೆ ಚಿನ್ನದ ಉಂಗುರ ಮತ್ತು ಸ್ವೀಟ್​ ಬಾಕ್ಸ್​ ಅನ್ನು ಉಡುಗೊರೆಯಾಗಿ ಕಾವ್ಯ ನೀಡಿದ್ದಾರೆ. ವರದಿಗಳ ಪ್ರಕಾರ, ದುಬಾರಿ ಗಿಫ್ಟ್​ ಬಾಕ್ಸ್‌ನಲ್ಲಿ ಮದುವೆಯ ಆಮಂತ್ರಣ ಪತ್ರಿಕೆ, ಚಾಕೊಲೇಟ್‌ಗಳು ಹಾಗೂ ಚಿನ್ನದ ಉಂಗುರವಿದೆ ಎಂದು ತೋರಿಸಲಾಗಿದೆ. ಈ ಉಡುಗೊರೆ ಸ್ವೀಕರಿಸಿದ ಉದ್ಯೋಗಿಯೊಬ್ಬರು, ತಮಗೆ ಚಿನ್ನದ ನಾಣ್ಯ ಸಿಗಬಹುದು ಎಂದು ನಿರೀಕ್ಷೆಯಿತ್ತು. ಆದರೆ, ಗೋಲ್ಡ್​ ರಿಂಗ್ ಇರುತ್ತೆ ಎಂದು ಖಂಡಿತ ಊಹಿಸಿರಲಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಉಡುಗೊರೆ ಬಾಕ್ಸ್‌ನಲ್ಲಿರುವ ಆಮಂತ್ರಣ ಪತ್ರಿಕೆಯ ಪ್ರಕಾರ, ಇದೇ ನವೆಂಬರ್ 25ರಂದು ಮಧ್ಯಾಹ್ನ ಭೋಜನಕೂಟ ಆಯೋಜಿಸಲಾಗಿದೆ. ಇದು ಸನ್ ಗ್ರೂಪ್ ಉದ್ಯೋಗಿಗಳಿಗಾಗಿಯೇ ಆಯೋಜಿಸಿರುವ ವಿಶೇಷ ಕಾರ್ಯಕ್ರಮವೇ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಉಂಗುರಗಳ ತೂಕ ಅಥವಾ ಬೆಲೆ ಹಾಗೂ ಎಷ್ಟು ಉದ್ಯೋಗಿಗಳಿಗೆ ಉಡುಗೊರೆ ಕೊಡಲಾಗಿದೆ ಎಂಬ ಬಗ್ಗೆಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಕಾವ್ಯ ಮಾರನ್​ ಮತ್ತು ಸನ್​ ಗ್ರೂಪ್ಸ್​ ಕಂಪನಿಯ ಈ ನಡೆಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನಿರುದ್ಧ್ ರವಿಚಂದರ್​ ಕೈಹಿಡಿದ ಬ್ಯೂಟಿಗೆ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

ಇನ್ನು, ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ನವೆಂಬರ್ 11ರಂದು ಗ್ರೀಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕುಟುಂಬದ ಸದಸ್ಯರು ಹಾಗೂ ಆಯ್ದ ಗಣ್ಯರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು. ಸೂಪರ್‌ಸ್ಟಾರ್ ರಜಿನಿಕಾಂತ್ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು. ದಂಪತಿಯ ಮದುವೆಯ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಸಿನಿಪ್ರಿಯರ ಗಮನ ಸೆಳೆದಿವೆ,(ಏಜೆನ್ಸೀಸ್).