​Karuppu movie Ilaiyaraaja  
ಸಿನಿವಾಣಿ

ಇಳಯರಾಜಾರ ಹಕ್ಕುಸ್ವಾಮ್ಯ ಹೋರಾಟದ ಬಗ್ಗೆ ಲೇವಡಿ; ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಾರಿ ಕೇಳಿ, ಡೈಲಾಗ್ ತೆಗೆದ​'Karuppu ಚಿತ್ರತಂಡ

ಪ್ರಮುಖ ಮುಖ್ಯಾಂಶಗಳು

  • ಇಳಯರಾಜಾ ಅವರ ಕೃತಿಸ್ವಾಮ್ಯ ಹೋರಾಟವನ್ನು ಅಣಕಿಸುವ ಸಂಭಾಷಣೆ ತಂದ ಕರುಪ್ಪು ಸಿನಿಮಾ ತಂಡ
  • ಇಳಯರಾಜಾ ಅಭಿಮಾನಿಗಳಿಂದ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತ
  • ಕ್ಷಮೆಯಾಚಿಸಿ, ಡೈಲಾಗ್​ ತೆಗೆದಿದ್ದೇವೆ ಎಂದು ಪೋಸ್ಟ್ ಹಂಚಿಕೊಂಡ 'ಡ್ರೀಮ್ ವಾರಿಯರ್ ಪಿಕ್ಚರ್ಸ್'
​Karuppu movie Ilaiyaraaja : ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡ ಸಿನಿಮಾ ತಂಡಗಳ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರು ಕಾನೂನು ಹೋರಾಟ ಮಾಡುತ್ತಿದ್ದಾರೆ.  ಅವರ ಈ ಹಕ್ಕುಸ್ವಾಮ್ಯ ಹೋರಾಟವನ್ನು ಕರುಪ್ಪು ಸಿನಿಮಾದಲ್ಲಿ  ಲೇವಡಿ ಮಾಡಿ ಸಂಭಾಷಣೆ ಬರೆದಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿನಿಮಾ ತಂಡ ಕ್ಷಮೆಯಾಚಿಸಿ ಡೈಲಾಗ್​ ಅಳಿಸಲಾಗಿದೆ ಎಂದು ಪ್ರಕಟಣೆಯನ್ನು ಹಂಚಿಕೊಂಡಿದೆ.
ಕಾಲಿವುಡ್​​ ನಟ ಸೂರ್ಯ ನಟನೆಯ, ಆರ್​ಜೆ ಬಾಲಾಜಿ ನಿರ್ದೇಶನದ ಕರುಪ್ಪು ಸಿನಿಮಾ ಸದ್ಯ ಚಿತ್ರಮಂದಿರದಲ್ಲಿ ಒಳ್ಳೆಯ ಗೆಲುವನ್ನು ಪಡೆದುಕೊಂಡಿದೆ. ಇಲ್ಲಿಯವರೆಗೂ ಬಾಕ್ಸ್​ ಆಫೀಸ್​ನಲ್ಲಿ 147 ಕೋಟಿ ರೂಪಾಯಿ ಗಳಿಸಿದೆ.ಆ ಬೆನ್ನಲ್ಲೇ ಈ ವಿವಾದಕ್ಕೆ ಸಿನಿಮಾ ತಂಡ ಸಿಲುಕಿದೆ. 

ಕರುಪ್ಪು ಸಿನಿಮಾದಲ್ಲಿರೋದೇನು?

ಕರುಪ್ಪು ಸಿನಿಮಾದ ಒಂದು ದೃಶ್ಯದಲ್ಲಿ ಅಲೈ ಒಸೈ ಸಿನಿಮಾ 1985ರಲ್ಲಿ ರಿಲೀಸ್​ ಆಗಿತ್ತು. ಇದರಲ್ಲಿರುವ ಪೋರಾಡದ ಹಾಡನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡಿನ ಕೃತಿಸ್ವಾಮ್ಯವನ್ನು ಅಧಿಕೃತವಾಗಿ ಪಡೆಯಲಾಗಿದೆಯೇ? ಇಲ್ಲದಿದ್ದರೆ ಹಿರಿಯ ಸಂಗೀತ ನಿರ್ದೇಶಕರು ಕಾನೂನು ಮೊಕದ್ದಮೆ ಹೂಡಬಹುದು ಎಂಬ ಧಾಟಿಯಲ್ಲಿ ಲೇವಡಿ ಮಾಡಿ ಡೈಲಾಗ್​ ಬರೆಯಲಾಗಿತ್ತು. ಇಳಯರಾಜರ ಹೋರಾಟವನ್ನು ಈ ಮೂಲಕ ಅಣಕಿಸಲಾಗಿತ್ತು.
ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆಯಾದ ನಂತರ ಡೈಲಾಗ್​ ಕಂಡ ಇಳಯರಾಜಾ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ನಿರ್ದೇಶಕರ ವಿರುದ್ಧ ಹಿಗ್ಗಾಮುಗ್ಗ ಟೀಕೆ ಮಾಡಿದರು. ಸಣಗೀತ ದಿಗ್ಗಜನಿಗೆ ಅವಮಾನ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.  ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಸಿನಿಮಾ ತಂಡ ಕ್ಷಮೆಯಾಚಿಸಿ ದೃಶ್ಯವನ್ನು ತಿದ್ದುಪಡಿ ಮಾಡಿದೆ  ಎಂದು ಡ್ರೀಮ್ ವಾರಿಯರ್ಸ್​ ಪಿಕ್ಚರ್ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಡ್ರೀಮ್ ವಾರಿಯರ್ಸ್​ ಪಿಕ್ಚರ್ ಪೋಸ್ಟ್​ನಲ್ಲಿ ಏನಿದೆ?

ನಮ್ಮ ನಿರ್ಮಾಣ ಸಂಸ್ಥೆ ಇಳಯರಾಜಾ ಅವರು ಭಾರತ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುತ್ತದೆ. ಕರುಪ್ಪು ಸಿನಿಮಾದಲ್ಲಿರುವ ಒಂದು ಡೈ;ಆಗ್​ ಅವರ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಸಿನಿಮಾ ತಂಡ ಕ್ಷಮೆಯಾಚಿಸುತ್ತದೆ. ಇಳಯರಾಜರನ್ನಾಗಲಿ ಅಥವಾ ಅವರ ಹಕ್ಕನ್ನು ಅವಮಾನಿಸುವ ದುರುದ್ದೇಶ ತಂಡಕ್ಕಿರಲಿಲ್ಲ ಇದು ಕೇವಲ ಹಾಸ್ಯದ ಸನ್ನಿವೇಶ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. 
ಇಳಯರಾಜರ ಭಾವನೆಗಳಿಗೆ ಗೌರವ ನೀಡಿ, ಚಿತ್ರದ ಮುಂದಿನ ಪ್ರದರ್ಶನ ಹಾಗೂ ಓಟಿಟಿ ಸೇರಿದಂತೆ ಎಲ್ಲ ಆವೃತ್ತಿಗಳಿಂದ ಈ ವಿವಾದಾತ್ಮಕ ಸಂಭಾಷಣೆಯನ್ನು ತೆಗೆದುಹಾಕಲಾಗುವುದು. ದೃಶ್ಯವನ್ನು ಸಂಪೂರ್ಣವಾಗಿ ತೆಗೆದು ಹಾಕಲು, ಅಥವಾ ಮಾರ್ಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ. 

ಇಳಯರಾಜರ ಇಲ್ಲಿಯವರೆಗಿನ ಹೋರಾಟ

ಗುಡ್​ ಬ್ಯಾಡ್​ ಅಗ್ಲಿ ಸಿನಿಮಾ ತಂಡ  ಸಂಗೀತ ನಿರ್ದೇಶಕ ಇಳಯರಾಜ ಅವರ ಹಾಡನ್ನು ಬಳಸಿಕೊಂಡಿದ್ದಕ್ಕಾಗಿ ಕಾನೂನು ಮೂಲಕ ಹೋರಾಟ ನಡೆಸಿ 50 ಲಕ್ಷದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು. ಇನ್ನು ಮಂಜುಮ್ಮೆಲ್​ ಬಾಯ್ಸ್​ನಲ್ಲಿ ಅವರ ಗುಣ ಸಿನಿಮಾದ ಕಣ್ಮಣಿ  ಸೂಪರ್​ ಹಿಟ್ ಹಾಡು ಬಳಕೆ ಮಾಡಿಕೊಂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಸರಿಗಮಪ ಶೋ, ಸೋನಿ ಮ್ಯೂಸಿಕ್​ನಂತಹ ದೈತ್ಯ ಸಂಸ್ಥೆಗಳ ಮೇಲೆ ಇಂದಿಗೂ ವಿವಾದಗಳು ಇದ್ದು ಕಾನೂನು ಹೋರಾಟ ನಡೆಯುತ್ತಿದೆ. ಅಲ್ಲದೆ ಎಐ ಬಳಕೆ ಮಾಡು ಹಾಡನ್ನು ತಿರುಚುತ್ತಿರುವ ಬಗ್ಗೆ ಇಳಯರಾಜ ಅವರು ಬೇಸರ ವ್ಯಕ್ತಪಡಿಸಿದ್ದರು, (ಏಜೆನ್ಸೀಸ್).