ಮುಂಬೈ: ಅದ್ಯಾಕೋ ಕಾರ್ತಿಕ್ ಆರ್ಯನ್ ಅದೃಷ್ಟವೇ ನೆಟ್ಟಗಿದ್ದಂತಿಲ್ಲ. ಕರಣ್ ಜೋಹಾರ್ ನಿರ್ಮಾಣದ 'ದೋಸ್ತಾನ 2' ಮತ್ತು ಶಾರೂಖ್ ಖಾನ್ ಅವರ ರೆಡ್ಚಿಲ್ಲೀಸ್ ನಿರ್ಮಾಣದ ಹೊಸ ಚಿತ್ರ 'ಫ್ರೆಡ್ಡಿ'ಯಿಂದ ಹೊರಬಿದ್ದಿದ್ದ ಕಾರ್ತಿಕ್ ಆರ್ಯನ್, ಇದೀಗ ಇನ್ನೊಂದು ಚಿತ್ರದಿಂದ ಔಟ್ ಆಗಿದ್ದಾರೆ. ನಂಬಿದರೆ ನಂಬಿ, ಕಳೆದ ಒಂದು ತಿಂಗಳಲ್ಲಿ ಕಾರ್ತಿಕ್ ಕಳೆದುಕೊಳ್ಳುತ್ತಿರುವ ಮೂರನೆಯ ಚಿತ್ರ ಇದು.
'ಪತಿ ಪತ್ನಿ ಔರ್ ವೋ', 'ಲವ್ ಆಜ್ ಕಲ್' ಮುಂತಾದ ಚಿತ್ರಗಳ ಯಶಸ್ಸಿನಿಂದ ಕಾರ್ತಿಕ್ ಆರ್ಯನ್, ಬಾಲಿವುಡ್ನ ಬೇಡಿಕೆಯ ನಟರಾಗಿದ್ದರು. ಹಲವು ಪ್ರತಿಷ್ಠಿತ ನಿರ್ಮಾಣದ ಚಿತ್ರಗಳಿಗೆ ಆಯ್ಕೆಯಾಗಿದ್ದರು. ಆದರೆ, ಈಗ ಒಂದೊಂದೇ ಚಿತ್ರವನ್ನು ಅವರು ಕಳೆದುಕೊಳ್ಳುತ್ತಿದ್ದಾರೆ.
ಕಾರ್ತಿಕ್ ಆರ್ಯನ್ ಇತ್ತೀಚೆಗೆ ಆನಂದ್ ಎಲ್ ರೈ ನಿರ್ದೇಶನದ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದರು. ಕಾರ್ತಿಕ್ ಮತ್ತು ಆನಂದ್ ನಡುವೆ ಈ ಕುರಿತು ಮಾತುಕತೆಯೂ ಆಗಿತ್ತು. ಇನ್ನೇನು ಅವರಿಬ್ಬರ ಮಧ್ಯೆ ಅಗ್ರೀಮೆಂಟ್ ಆಗಬೇಕು ಎನ್ನುವಷ್ಟರಲ್ಲಿ, ಆ ಚಿತ್ರದಿಂದ ಅವರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ತಿಕ್ ಬದಲು ಆಯುಷ್ಮಾನ್ ಖುರಾನಾ ಅವರಿಗೆ ಚಿತ್ರದಲ್ಲಿ ನಟಿಸುವ ಆಫರ್ ನೀಡಲಾಗಿದ್ದು, ಅವರು ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ.
ಇಷ್ಟಕ್ಕೂ ಕಾರ್ತಿಕ್ ಅವರನ್ನುಈ ಚಿತ್ರದಿಂದ ಕೈಬಿಡಲಾಗಿದ್ದು ಏಕೆ? ಎಂಬ ಪ್ರಶ್ನೆಗೆ ಇನ್ನೂ ಸಪರ್ಮಕ ಉತ್ತರ ಸಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಕಾರ್ತಿಕ್ ಸಾಕಷ್ಟು ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಅವರು 'ದೋಸ್ತಾನಾ 2' ಮತ್ತು 'ಫ್ರೆಡ್ಡಿ' ಚಿತ್ರಗಳನ್ನು ಸಹ ಕಳೆದುಕೊಂಡರು ಎಂಬ ಮಾತಿದೆ. ಅದು ನಿಜವಾದರೆ, ಕಾರ್ತಿಕ್ ತನ್ನ ವರಸೆ ಬದಲಿಸಿಕೊಳ್ಳಬೇಕಿದೆ.