ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 10 ವರ್ಷಗಳ ಕಾಲ ವಿವಿಧ ವಿಭಾಗದಲ್ಲಿ ಕೆಲಸ ಮಾಡಿರುವ ಕರ್ಣನ್ ಇದೀಗ ಡೈರಕ್ಟರ್ ಆಗಿ ಬಡ್ತಿ ಹೊಂದಿದ್ದು, ಮೊದಲ ಬಾರಿಗೆ ‘ಧೀರ ಭಗತ್ ರಾಯ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸಾಮಾಜಿಕ ಹಿನ್ನೆಲೆಯ ಕಥಾ ಹಂದರದ ಈ ಚಿತ್ರದಲ್ಲಿ ರಾಕೇಶ್ ದಳವಾಯಿ, ಸುಚರಿತಾ, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೇ ತಿಂಗಳ ಡಿ.6ಕ್ಕೆ ಸಿನಿಮಾ ಬಿಡುಗಡೆಯಾಗುವ ಮೂಲಕ ತೆಲುಗಿನ ಪುಷ್ಪರಾಜ್‌ಗೆ ಧೀರ ಭಗತ್ ರಾಯ್ ಸೆಡ್ಡು ಹೊಡೆದಿದ್ದಾನೆ. ಚಿತ್ರದ ಬಗ್ಗೆ ನಿರ್ದೇಶಕ ಕರ್ಣನ್ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ‘ಈ ಚಿತ್ರಕ್ಕೆ 1974ರಲ್ಲಿ ಜಾರಿಯಾದ ಭೂ ಸುಧಾರಣೆ ಕಾಯ್ದೆಯ ಹಿನ್ನೆಲೆಯಿದೆ. ಒಂದು ಸಾಮಾಜಿಕ ವಿಚಾರವನ್ನು ಒಂದಷ್ಟು ಕಮರ್ಷಿಯಲ್ ಎಲಿಮೆಂಟ್‌ನೊಂದಿಗೆ ಕಥೆ ರೂಪಿಸಿದ್ದೇನೆ. ಚಿತ್ರದ ಕಥೆಗಾಗಿ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ, ರೈತರನ್ನು ಸಂದರ್ಶಿಸಿದ್ದೇನೆ. ಇದೊಂದು ನೆಲಮೂಲದ ಕಥೆ. ನಾನು ಕೂಡ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರಿಂದ ಅಲ್ಲಿನ ಅನುಭವಗಳನ್ನು ಇಲ್ಲಿ ಚಿತ್ರಿಸಿದ್ದೇನೆ. ಜತೆಗೆ ರಂಗಭೂಮಿ ಹಿನ್ನೆಲೆಯ ಕಲಾವಿದರು ತಾರಾಗಣದಲ್ಲಿದ್ದು, ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ. ಕಂಟೆಂಟ್ ಇರುವ ಈ ಚಿತ್ರವು ತಾಂತ್ರಿಕವಾಗಿ ಚೆನ್ನಾಗಿ ಮೂಡಿಬರುವಂತೆ ನೋಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.
ರೈತರಿಗೆ ಪ್ರೀಮಿಯರ್ ಶೋ: ‘ಧೀರ ಭಗತ್ ರಾಯ್’ ತಂಡ ವಿಭಿನ್ನ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಸಿನಿಮಾ ಪ್ರಚಾರಕ್ಕೆ ಮುಂದಾಗುತ್ತಿದೆ. ಈ ಬಗ್ಗೆ ಕರ್ಣನ್, ‘ಇದು ರೈತರ ಬದುಕಿನ ಕಥೆಯಾಗಿದ್ದರಿಂದ ರೈತರಿಗೆ ಹಾಗೂ ಪೌರ ಕಾರ್ಮಿಕರಿಗೆ ಪ್ರೀಮಿಯರ್ ಶೋ ಆಯೋಜಿಸುವ ಯೋಚನೆಯಿದೆ. ಜತೆಗೆ ಹಲವು ಕಡೆ ಆಹಾರ ಧಾನ್ಯಗಳನ್ನು ವಿತರಿಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಡಿ.5ಕ್ಕೆ ‘ಪುಷ್ಪ-2’ ಬಿಡುಗಡೆಯಾಗಲಿದ್ದು, ಇದರ ಪರಿಣಾಮ ಚಿತ್ರದ ಮೇಲೆ ಬೀರಲಿದೆಯೇ ಎಂಬ ಪ್ರಶ್ನೆಗೆ, ‘ಈ ವಾರ ಕನ್ನಡದ ಎರಡು-ಮೂರು ಸಿನಿಮಾ ರಿಲೀಸ್ ಆಗುತ್ತಿವೆ. ಅದರಲ್ಲಿ ‘ಧೀರ ಭಗತ್ ರಾಯ್’ ಒಂದು. ಹಾಗಾಗಿ ಕನ್ನಡಿಗರು ನಮ್ಮ ಸಿನಿಮಾ ನೋಡುತ್ತಾರೆ ಎಂಬ ಭರವಸೆ ಇದೆ. ನಾವು ಅಂದುಕೊಂಡಂತೆಯೇ 100 ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ’ ಎನ್ನುತ್ತಾರೆ.