ಸಿನಿವಾಣಿ

ರಾಂಪ್​ ವಾಕ್​ ಮಾಡಿ ಗಮನ ಸೆಳೆದ ಕರೀನಾ; 'ನನ್ನ ಆಯ್ಕೆಗೆ ಬಿಟ್ಟಿದ್ದರೆ, ಕಫ್ತಾನ್ ತೊಟ್ಟಿರುತ್ತಿದ್ದೆ' ಎಂದರು!

ಮುಂಬೈ: ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಲಾಕ್ಮೆ ಫ್ಯಾಶನ್​ ವೀಕ್​ನಲ್ಲಿ ಆಕರ್ಷಕ ಗೌನ್​ ಧರಿಸಿ ರಾಂಪ್​ ವಾಕ್ ಮಾಡಿದ್ದಾರೆ, ಬಾಲಿವುಡ್ ನಟಿ ಕರೀನಾ ಕಪೂರ್​! ಡಿಸೈನರ್​ ಗೌರವ್​ ಗುಪ್ತ ಅವರ ಬಿಳಿಯ ಹೊಳೆಯುವ ಬಟ್ಟೆಯಲ್ಲಿ ತಯಾರಿಸಿದ ಗೌನಿನಲ್ಲಿ ಎಲ್ಲರ ಮನ ಸೆಳೆದ ಕರೀನಾ, ತಮ್ಮ ಆಯ್ಕೆಗೆ ಬಿಟ್ಟಿದ್ದರೆ, ಕಫ್ತಾನ್​ ಧರಿಸಿರುತ್ತಿದ್ದೆ ಎಂದಿದ್ದಾರೆ.

ಕರೀನಾ ಮತ್ತು ಸಾಯಿಫ್​ ಅಲಿ ಖಾನ್​ ದಂಪತಿಗೆ ತೈಮುರ್ ಮತ್ತು ಜೆಹಂಗೀರ್​ ಎಂಬ ಇಬ್ಬರು ಪುತ್ರರಿದ್ದಾರೆ. ಇಬ್ಬರು ಮಕ್ಕಳ ತಾಯಾದ ಮೇಲೂ ತಮ್ಮ ಗ್ಲಾಮರ್ ಲುಕ್​ ಉಳಿಸಿಕೊಂಡಿರುವ ಕರೀನಾ, ಭಾನುವಾರ ನಡೆದ ಡಿಸೈನರ್​ ಗುಪ್ತಾರ ಫ್ಯಾಶನ್​ ಶೋನ ಫೇನಾಲೆಯಲ್ಲಿ 'ಶೋಸ್ಟಾಪರ್​' ಆಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಟ್ಟೆಯನ್ನು ಟ್ರೆಂಡ್​ಗಾಗಿ ಅಲ್ಲ, ಕಂಫರ್ಟ್​ಗಾಗಿ ತೊಡುವೆ" ಎಂದಿದ್ದಾರೆ.

ತಮ್ಮ ಎರಡನೇ ಕೂಸು ಗರ್ಭದಲ್ಲಿದ್ದಾಗ ಹೆಚ್ಚು ಸಮಯವನ್ನು ಲೂಸ್​ ಫಿಟ್​ ನೈಟಿಯಾದ ಕಫ್ತಾನ್​​ನಲ್ಲೇ ಕಳೆದಿರುವ ಕರೀನಾ, "ನನ್ನ ಮಾತು ನಡೆಯುವ ಹಾಗಿದ್ದರೆ, ನಾನು ಈಗಲೂ ಕಫ್ತಾನ್​ನಲ್ಲೇ ಇರುತ್ತಿದ್ದೆ. ಬಹುಶಃ ಮುಂದಿನ ಬಾರಿ ನೀವು ನನ್ನನ್ನು ರನ್​ವೇ ಮೇಲೆ ಅದರಲ್ಲೇ ನೋಡುವಿರಿ" ಎಂದು ನಸುನಕ್ಕಿದ್ದಾರೆ.

ಜೊತೆಗೆ, “ನನ್ನ ಫ್ಯಾಶನ್​ ಆಯ್ಕೆಗಳು ಯಾವಾಗಲೂ ಕಂಫರ್ಟ್​​ಗೆ ಸಂಬಂಧಿಸಿದ್ದಾಗಿವೆ - ಅವು ಆಕರ್ಷಕ ಎನಿಸುವ ಕ್ಯಾಶುವಲ್​ ಲುಕ್ಸ್​ ಹೊಂದಿರುತ್ತವೆ. ಇತ್ತೀಚಿನ ನನ್ನ ಜೀವನದಲ್ಲಿ ಸುಲಭವಾಗಿ ಚೆನ್ನಾಗಿ ಕಾಣುವ ಅಗತ್ಯಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ಕೇವಲ ಟ್ರೆಂಡ್​ನಲ್ಲಿದೆ ಅಂತ ನಾನು ಯಾವುದೋ ಬಟ್ಟೆಯನ್ನು ತೊಡುವುದಿಲ್ಲ. ಉದಾಹರಣೆಗೆ, ಈಗಿನ ದಿನಗಳಲ್ಲಿ ನಾನು ಬೈಕರ್ ಶಾರ್ಟ್ಸ್​ ತೊಡುತ್ತಿದ್ದೇನೆ.. ಅವರು ಟ್ರೆಂಡಿ ಅಂತಲ್ಲ, ಬಾಂಬೆಯಲ್ಲಿ ಈಗ ತುಂಬಾ ಸೆಖೆ ಇದೆ” ಎಂದು ಕರೀನಾ ಹೇಳಿದ್ದಾರೆ. (ಏಜೆನ್ಸೀಸ್​​)