ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ಕಂಗನಾ ರಣಾವತ್, ಬಾಲಿವುನಲ್ಲಿ ಪ್ರಚಲಿತದಲ್ಲಿರುವ ನೆಪೋಟಿಸಂ ಮತ್ತು ಸ್ಟಾರ್ ಮಕ್ಕಳ ಬಗ್ಗೆ ಕಿಡಿಕಾರುತ್ತಲೇ ಬಂದಿದೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ, ಕರೀನಾ ಕಪೂರ್ ಒಂದೇ ಒಂದು ಮಾತನಾಡಿರಲಿಲ್ಲ. ಸ್ವಜನಪಕ್ಷಪಾತದ ವಿಷಯ ಹೆಚ್ಚು ಅಪ್ಲೈ ಆಗುವುದು ಕರೀನಾಗೆ ಎಂದರೆ ತಪ್ಪಿಲ್ಲ. ಏಕೆಂದರೆ, ಅವರದ್ದು ಫಿಲ್ಮಿ ಕುಟುಂಬ. ಅಪ್ಪ, ತಾತ, ಚಿಕ್ಕಪ್ಪ, ಅಮ್ಮ, ಅಕ್ಕ ... ಎಲ್ಲರೂ ಸಿನಿಮಾದಲ್ಲಿ ನಟಿಸಿದವರೇ. ಹಾಗಾಗಿ ಅವರಿಗೆ ಈ ಸ್ವಜನಪಕ್ಷಪಾತದ ಬಿಸಿ ಸ್ವಲ್ಪ ಹೆಚ್ಚಾಗಿಯೇ ಮುಟ್ಟುತ್ತದೆ.
ಆದರೆ, ಕರೀನಾ ಮಾತ್ರ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಬರೀ ನೆಪೋಟಿಸಂನಿಂದಾಗಿ ಚಿತ್ರರಂಗದಲ್ಲಿ 20 ವರ್ಷಗಳ ಕಾಲ ಉಳಿಯುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಅವರ ಅಭಿಪ್ರಾಯ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಇಲ್ಲಿ ಗೆಲುವು ಜನರ ಮೇಲೆ ಅವಲಂಬಿತವಾಗಿದೆಯೇ ಹೊರತು, ಯಾರ ಮಕ್ಕಳು ಎಂಬ ವಿಷಯದಲ್ಲಿ ಅಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
'ತಂದೆ ಅಥವಾ ತಾತ ಚಿತ್ರರಂಗದಲ್ಲಿದ್ದರೆ, ನಾವು ಉಳಿಯುವಕ್ಕೆ ಸಾಧ್ಯವಿಲ್ಲ. ನಾವು ಉಳಿಯಬೇಕಿದ್ದರೆ ಅದು ಜನರಿಂದ ಮಾತ್ರ ಸಾಧ್ಯ. ಜನ ಚಿತ್ರ ನೋಡಿ, ಹರಸಿ-ಹಾರೈಸಿದರೆ ಮಾತ್ರ ಇಲ್ಲಿ ಉಳಿಯಬಹುದು. ಇಲ್ಲ ಬಹಳ ಕಷ್ಟ. ಎಷ್ಟು ಜನ ಯಶಸ್ವಿ ನಟರ ಮಕ್ಕಳು, ತಮ್ಮ ತಂದೆಯಂತೆ ಇಲ್ಲಿ ಉಳಿದುಕೊಂದಿದ್ದಾರೆ ಹೇಳಿ' ಎಂದು ಅವರು ಪ್ರಶ್ನಿಸಿದ್ದಾರೆ.
'ನಮ್ಮನ್ನು ಉಳಿಸಿ, ಬೆಳೆಸಿದ್ದು ಜನ. ಬೇರೆ ಯಾರೂ ಅಲ್ಲ. ಜನ ಚಿತ್ರ ನೋಡಿದರೆ ಮಾತ್ರ ನಾವು ಉಳಿಯೋಕೆ ಸಾಧ್ಯ. ಇನ್ನು ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ಟ್ರಗಲ್ ಇದ್ದೇ ಇರುತ್ತದೆ. ನಾನು ಇಷ್ಟು ವರ್ಷ ಇದ್ದೀನಿ ಎಂದರೆ ನಾನು ಸಹ ಹೋರಾಟ ಮಾಡಿಕೊಂಡೇ ಇಲ್ಲಿಯವರೆಗೂ ಬಂದಿದ್ದೇನೆ. ಜೇಬಲ್ಲಿ 10 ರೂಪಾಯಿ ಇಟ್ಟುಕೊಂಡು ರೈಲಿನಲ್ಲಿ ಬಂದು ಇಲ್ಲಿ ಗೆದ್ದಿರುವ ಹಲವರ ತರಹ ನನ್ನ ಕಥೆ ಆಸಕ್ತಿಕರವಾಗಿ ಇದಿರಬಹುದು. ಆದರೆ, ನನ್ನದೂ ಒಂದಿಷ್ಟು ಹೋರಾಟಗಳು ಇದ್ದೇ ಇದೆ' ಎಂದು ಕರೀನಾ ಹೇಳಿದ್ದಾರೆ.